ಬಿಸಿಸಿಐ ಸಂವಿಧಾನ ಬದಲಾವಣೆಗೆ ಒಪ್ಪಿಗೆ ನೀಡಿದ ಸುಪ್ರೀಂ ಕೋರ್ಟ್

Prasthutha|

ನವದೆಹಲಿ: ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಅವಧಿ ಮತ್ತು ಸಂಸ್ಥೆಯ ಸಂವಿಧಾನದಲ್ಲಿ ಕೆಲ ಬದಲಾವಣೆಗೆ ಅವಕಾಶ ಕೋರಿ ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ.
ಕೂಲಿಂಗ್ ಆಫ್ ಅವಧಿ ವಿಸ್ತರಣೆಗೆ ನ್ಯಾ. ಡಿವೈ ಚಂದ್ರಚೂಡ್ ಮತ್ತು ನ್ಯಾ. ಹಿಮಾ ಕೊಹ್ಲಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಹಸಿರು ನಿಶಾನೆ ತೋರಿದೆ.
ತೀರ್ಪಿನ ಪರಿಣಾಮ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರ ಅವಧಿ, ಮುಂದಿನ ಮೂರು ವರ್ಷಗಳಿಗೆ ವಿಸ್ತರಣೆಯಾಗಲಿದೆ.

- Advertisement -

ತಿದ್ದುಪಡಿಯ ನಂತರ ಪದಾಧಿಕಾರಿಗಳು ರಾಜ್ಯ ಮಟ್ಟದಲ್ಲಿ ಆರು ವರ್ಷ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆರು ವರ್ಷ ಅಧಿಕಾರ ಹಿಡಿಯಲು ಸಾಧ್ಯವಾಗಲಿದೆ. “ಬಿಸಿಸಿಐ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ಕಾರ್ಯನಿರ್ವಹಿಸುವಿಕೆಯ ಮೇಲೆ ಸದಾ ಕಣ್ಣಿಡಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ, ಕಾರ್ಯದರ್ಶಿಯಾಗಿ ಜಯ್ ಶಾ ಅವರೇ ಮತ್ತೊಂದು ಅವಧಿಗೆ ಮುಂದುವರಿಯಬೇಕು ಎನ್ನುವ ಕಾರಣಕ್ಕೆ ಕೂಲಿಂಗ್ ಆಫ್ ನಿಯಮ ರದ್ದುಗೊಳಿಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿತ್ತು. ನ್ಯಾಯಮೂರ್ತಿ ಲೋಧಾ ಸಮಿತಿ ಮಾಡಿದ್ದ ಶಿಫಾರಸುಗಳಲ್ಲಿ ಕೂಲಿಂಗ್ ಆಫ್ ನಿಯಮವೂ ಒಂದಾಗಿತ್ತು. ಮತ್ತೊಂದು ಅವಧಿಗೆ ಮುಂದುವರಿಯಲು ಅವಕಾಶ ನೀಡುವಂತೆ ಗಂಗೂಲಿ ಹಾಗೂ ಶಾ ಬಿಸಿಸಿಐ ವಕೀಲರ ಮೂಲಕ ಮನವಿ ಸಲ್ಲಿಸಿದ್ದರು.

- Advertisement -

ಬಿಸಿಸಿಐ ಮಾಡಲು ಬಯಸಿದ ತಿದ್ದುಪಡಿ ಪ್ರಕಾರ, ಒಬ್ಬ ಪದಾಧಿಕಾರಿಯು ರಾಜ್ಯ ಅಸೋಸಿಯೇಷನ್ ಅಥವಾ ಬಿಸಿಸಿಐ ಅಥವಾ ಎರಡರ ಸಂಯೋಜನೆಯಲ್ಲಿ ಮೂರು ವರ್ಷಗಳ ಕಾಲ ಸತತ ಎರಡು ಅವಧಿಗಳನ್ನು ನಿಭಾಯಿಸಿದ ಮೇಲೆ ಕೂಲಿಂಗ್-ಆಫ್ ಅವಧಿ ಅನ್ವಯವಾಗುತ್ತದೆ. ಬಿಸಿಸಿಐ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ವಾ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠಕ್ಕೆ ದೇಶದಲ್ಲಿ ಕ್ರಿಕೆಟ್ ಆಟವು ಗಣನೀಯವಾಗಿ ಸುವ್ಯವಸ್ಥಿತವಾಗಿದೆ ಎಂದು ಹೇಳಿದರು.



Join Whatsapp