ಪ್ರಾದೇಶಿಕ ಭಾಷೆಗಳ ಕತ್ತು ಹಿಸುಕುವ ಕೇಂದ್ರದ ನಡೆ ಅಕ್ಷಮ್ಯ : ಹೆಚ್.ಡಿ.ಕುಮಾರಸ್ವಾಮಿ

Prasthutha|

ಬೆಂಗಳೂರು: ಕೇಂದ್ರ ಸರಕಾರ ಆಚರಿಸುತ್ತಿರುವ ಹಿಂದಿ ದಿವಸಕ್ಕೆ ರಾಜ್ಯ ಬಿಜೆಪಿ ಸರಕಾರ ಕನ್ನಡವನ್ನು ಧಿಕ್ಕರಿಸಿ ಬೆಂಬಲ ನೀಡುತ್ತಿರುವುದು ಅತ್ಯಂತ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಹಿಂದಿ ದಿವಸ ವಿರೋಧಿಸಿ ಜೆಡಿಎಸ್ ವತಿಯಿಂದ  ನಡೆದ ಪ್ರತಿಭಟನೆಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರಕ್ಕೆ ಭಾಷಾ ಸಹಿಷ್ಣುತೆ ಇಲ್ಲ. ರಾಜ್ಯಗಳ ಮೇಲೆ, ಅದರಲ್ಲೂ ಕರ್ನಾಟಕದ ಮೇಲೆ ಪದೇ ಪದೇ  ಹಿಂದಿ ಹೇರಿಕೆ ಮಾಡುತ್ತಲೇ ಇದೆ. ಪ್ರಾದೇಶಿಕ ಭಾಷೆಗಳನ್ನು, ಮುಖ್ಯವಾಗಿ ಕನ್ನಡವನ್ನು ಹತ್ತಿಕ್ಕುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ ಎಂದು ನೇರವಾಗಿ ಆರೋಪಿಸಿದರು.

ಒಂದು ಭಾಷೆ ಒಂದು ರಾಷ್ಟ್ರ ಎಂಬ ಗೃಹ ಸಚಿವರ ಹೇಳಿಕೆ ಸರಿಯಲ್ಲ. ಕೇವಲ ಹಿಂದಿ ಒಂದು ಭಾಷೆಯಿಂದ ಭಾರತ ಒಂದಾಗಿ ಉಳಿದಿಲ್ಲ. ವಿವಿಧತೆಯಲ್ಲಿ ಏಕತೆ ಭಾರತದ ಶಕ್ತಿ. ಅದನ್ನೇ ಹಾಳು ಮಾಡಿದರೆ ದೇಶವನ್ನು ಒಡೆದಂತೆ. ಕೆಲ ಭಾವನಾತ್ಮಕ ವಿಚಾರಗಳನ್ನು ಕೆಣಕುತ್ತಾ ದೇಶವನ್ನು ವಿಭಜಿಸಲಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಹಿಂದಿ ದಿವಸದ ಹೆಸರಿನಲ್ಲಿ ಕನ್ನಡಿಗರ ತೆರಿಗೆ ಹಣ ವ್ಯಯ ಮಾಡೋದು ಎಷ್ಟು ಸರಿ? ಈಗಾಗಲೇ ನೆರೆ ಹಾವಳಿ ಯಿಂದ ತತ್ತರಿಸಿರುವ ಜನರಿಗಿಂತಲೂ ಹಿಂದಿ  ಭಾಷೆಯ ವಿಚಾರ ಸರಕಾರಕ್ಕೆ ಮುಖ್ಯವಾಗಿದೆ. ಇದಕ್ಕೆ ಕನ್ನಡಿಗರ ಧಿಕ್ಕಾರವಿದೆ ಎಂದು ಅವರು ಕಿಡಿ ಕಾರಿದರು.

ಇವತ್ತು ಉತ್ತರ ಭಾರತದ ಕೆಲವು ಭಾಗದಲ್ಲಿ ಹಿಂದಿ ಇಲ್ಲ. ಅನೇಕ ರಾಜ್ಯಗಳಲ್ಲಿ ಅವರವರದೇ ಭಾಷೆ ಇದೆ. ತಮ್ಮ ಭಾಷೆಯನ್ನೇ ಮಾತನಾಡುತ್ತಾ ನೆಮ್ಮದಿಯಿಂದ ಇದ್ದಾರೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಪ್ರಾದೇಶಿಕ ಭಾಷೆಗಳ ಕತ್ತನ್ನು ಹಿಸುಕುವ ಕೇಂದ್ರದ ನಡೆಗೆ ನಮ್ಮ ವಿರೋಧ ಇದೆ. ಕನ್ನಡದ ಬಗ್ಗೆ ಯಾಕಿಷ್ಟು ಅಸಹನೆ ಇವರಿಗೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಜೆಡಿಎಸ್ ಶಾಸಕಾಂಗ ಪಕ್ಷದ ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು.



Join Whatsapp