ದೋಹಾ: ಚಾಲಕನ ನಿರ್ಲಕ್ಷ್ಯದಿಂದ ಶಾಲಾ ವಾಹನದಲ್ಲೇ 4 ವರ್ಷದ ಬಾಲಕಿ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಶಾಲೆಯನ್ನು ಮುಚ್ಚುವಂತೆ ಕತಾರ್ ಶಿಕ್ಷಣ ಸಚಿವಾಲಯ ಆದೇಶಿಸಿದೆ.
ಕೇರಳದ ಕೋಟ್ಟಯಂ ಮೂಲದ ಬಾಲಕಿ ಮಿನ್ಸಾ ಮರಿಯಂ ಜಾಕೋಬ್ ಕಲಿಯುತ್ತಿದ್ದ ದೋಹಾದ ಅಲ್ ವಕ್ರಾದ ಸ್ಪ್ರಿಂಗ್ ಫೀಲ್ಡ್ ಕಿಂಡರ್ ಗಾರ್ಡನ್ ಶಾಲೆಯನ್ನು ಮುಚ್ಚುವಂತೆ ಸಚಿವಾಲಯ ಆದೇಶಿಸಿದೆ.
ಈ ಶಾಲೆಯ ಎಲ್‌ಕೆಜಿಯಲ್ಲಿ ಕಲಿಯುತ್ತಿದ್ದ ಬಾಲಕಿಯ ಸಾವಿನಲ್ಲಿ ಶಾಲೆಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ದೋಹಾದಲ್ಲಿ ನೆಲೆಸಿರುವ ಕೋಟ್ಟಯಂನ ಚಿಙವನಂ ನಿವಾಸಿ ಅಭಿಲಾಷ್ ಚಾಕೋ, ಸೌಮ್ಯ ದಂಪತಿಯ ಪುತ್ರಿ ಕಳೆದ ಆದಿತ್ಯವಾರ ಶಾಲಾ ವಾಹನದಲ್ಲೇ ಮೃತಪಟ್ಟಿದ್ದಳು. ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ವೇಳೆ ಮಗು ಬಸ್ಸಿನಲ್ಲೇ ನಿದ್ರೆಗೆ ಜಾರಿತ್ತು. ಆದರೆ ಇದು ಗಮನಕ್ಕೆ ಬಾರದೇ ವಾಹನದ ಸಿಬ್ಬಂದಿ ಲಾಕ್ ಮಾಡಿದ್ದ. 11.30ರ ಸುಮಾರಿಗೆ ಮತ್ತೆ ಕರ್ತವ್ಯಕ್ಕೆ ಬಂದಾಗ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಬಾಲಕಿ ಬದುಕುಳಿಯಲಿಲ್ಲ.
ಘಟನೆ ಸಂಬಂಧ ಖೇದ ವ್ಯಕ್ತಪಡಿಸಿದ್ದ ಶಿಕ್ಷಣ ಸಚಿವೆ ಬುತೈನಾ ಬಿಂತ್ ಅಲಿ ಅಲ್ ನುಐಮಿ ಬಾಲಕಿಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಲ್ಲದೇ, ಘಟನೆಗೆ ಕಾರಣರಾದವರ ವಿರುದ್ಧ ಕ್ರಮದ ಭರವಸೆಯನ್ನೂ ನೀಡಿದ್ದರು.