ಸುರತ್ಕಲ್‌ ಟೋಲ್‌ ಗೇಟ್ ತೆರವುಗೊಳಿಸುವ ಬಗ್ಗೆ ಸೂಕ್ತ ಕ್ರಮ: ಕೇಂದ್ರ ಸಚಿವ ನಿತಿನ್‌ ಗಡ್ಕರಿ

Prasthutha|

ಮಂಗಳೂರು: 15 ದಿನಗಳ ಒಳಗಾಗಿ ಸುರತ್ಕಲ್‌ನ ಟೋಲ್‌ ಗೇಟನ್ನು ತೆರವುಗೊಳಿಸುವ ಬಗ್ಗೆ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಕ್ರಮ ಜರಗಿಸುವ ಭರವಸೆ ನೀಡಿರುವುದಾಗಿ ದಕ್ಷಿಣ ಕನ್ನಡ ಟ್ರಕ್‌ ಮಾಲಕರ ಸಂಘದ ಅಧ್ಯಕ್ಷ ಸುನೀಲ್‌ ಡಿ’ಸೋಜಾ ತಿಳಿಸಿದ್ದಾರೆ.

- Advertisement -


ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟ್ರಕ್‌ ಮಾಲಕರ ಸಂಘದ ರಾಜ್ಯಾಧ್ಯಕ್ಷ ಡಾ| ಜಿ.ಆರ್‌. ಷಣ್ಮುಗಪ್ಪ ಅವರು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಸೆ. 9ರಂದು ಟ್ರಾನ್ಸ್‌ ಪೋರ್ಟ್‌ ಮೀಟ್‌ ಸಭೆಯ ಬಳಿಕ ಭೇಟಿ ಮಾಡಿ ಟೋಲ್‌ ಗೇಟ್‌ ತೆರವು ಬಗ್ಗೆ ಮನವಿ ನೀಡಿದ್ದು, ಸಚಿವರಿಂದ ಭರವಸೆ ದೊರಕಿದೆ. ಟೋಲ್‌ ಗೇಟ್‌ ವಿರೋಧಿ ಸಮಿತಿ ಸೆ. 13ರಂದು ನಡೆಸಲು ಉದ್ದೇಶಿಸಿರುವ ಧರಣಿಯಲ್ಲಿ ನಾವೂ ಭಾಗಿಯಾಗುತ್ತೇವೆ. ಸರಕಾರ ಮಾತು ತಪ್ಪಿದಲ್ಲಿ ಟ್ರಕ್‌ಗಳ ಮೂಲಕ ಟೋಲ್‌ ಗೇಟ್‌ಗೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.


ಮಂಗಳೂರಿನಿಂದ ಲಾರಿಗಳಿಗೆ ಬಾಡಿಗೆ ನಿಗದಿ ಪಡಿಸುವ ಬಗ್ಗೆ ರಾಜ್ಯಾಧ್ಯಕ್ಷ ಷಣ್ಮುಗಪ್ಪ ಹಾಗೂ ಇತರರೊಂದಿಗೆ ಟ್ರಕ್‌ ಮಾಲಕರ ಸಂಘದ ಸಭೆ ಸೆ. 13ಮಂಗಳವಾರ ದಂದು ನಡೆಯಲಿದೆ. ಸಭೆಯಲ್ಲಿ ದರ ನಿಗದಿ ಪಡಿಸಿ ಜಾರಿಗೆ ತರುತ್ತೇವೆ. ಇದಕ್ಕೆ ವಿರೋಧ ಕಂಡುಬಂದಲ್ಲಿ ಲಾರಿ ಮುಷ್ಕರ ಸಹಿತ ನಮ್ಮ ಪ್ರತಿಭಟನೆ ಮುಂದಿನ ದಿನಗಳಲ್ಲಿ ಉಗ್ರವಾಗಿ ನಡೆಯಲಿದೆ ಎಂದು ತಿಳಿಸಿದರು.

- Advertisement -


ಸುರತ್ಕಲ್‌ ಟೋಲ್‌ ಗೇಟ್‌ ಮುಂಭಾಗ ಸೆ. 13ರಂದು ಹಮ್ಮಿಕೊಂಡಿರುವ ಸಾಮೂಹಿಕ ಧರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಟ್ಯಾಕ್ಸಿಮೆನ್ಸ್‌ ಮತ್ತು ಮ್ಯಾಕ್ಸಿ ಕ್ಯಾಬ್‌ ಅಸೋಸಿಯೇಶನ್‌, ಉಭಯ ಜಿಲ್ಲೆಗಳ ಬಸ್‌ ಮಾಲಕರ ಸಂಘಟನೆಗಳು, ಕಾರ್ಮಿಕರ ಸಂಘಟನೆಗಳು, ವಿವಿಧ ಪಕ್ಷಗಳು ಸೇರಿದಂತೆ ಹಲವು ಸಂಘ- ಸಂಸ್ಥೆಗಳು ಭಾಗವಹಿಸುವುದಾಗಿ ಘೋಷಿಸಿವೆ.



Join Whatsapp