ನವದೆಹಲಿ: ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹರಿದ್ವಾರ ಧರ್ಮ ಸಂಸದ್ ಪ್ರಕರಣದ ಆರೋಪಿ ಜಿತೇಂದ್ರ ನಾರಾಯಣ್ ತ್ಯಾಗಿ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬಿ.ವಿ.ನಾಗರತ್ನ ಅವರ ಪೀಠವು, ಈ ಹಿಂದೆ ವಾಸಿಂ ರಿಜ್ವಿ ಎಂದು ಕರೆಯಲ್ಪಡುತ್ತಿದ್ದ ತ್ಯಾಗಿ ಸುದ್ದಿ ವಾಹಿನಿ, ಸಾಮಾಜಿಕ ಮಾಧ್ಯಮಗಳನ್ನು ಮಾತನಾಡುವುದಿಲ್ಲ ಮತ್ತು ಇನ್ನು ಮುಂದೆ ನೇರವಾಗಿ ಅಥವಾ ಪರೋಕ್ಷವಾಗಿ ಅಂತಹ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಎಂದು ವಿಚಾರಣಾ ನ್ಯಾಯಾಲಯಕ್ಕೆ ಮುಚ್ಚಳಿಕೆಯನ್ನು ಸಲ್ಲಿಸುವಂತೆ ನಿರ್ದೇಶಿಸಿ ಜಾಮೀನು ನೀಡಿದೆ.
ಈ ವರ್ಷದ ಮಾರ್ಚ್ ನಲ್ಲಿ ಉತ್ತರಾಖಂಡ ಹೈಕೋರ್ಟ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನಂತರ ತ್ಯಾಗಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ವರ್ಷದ ಜನವರಿ 2 ರಂದು ಹರಿದ್ವಾರ ಕೊತ್ವಾಲಿಯ ಜ್ವಾಲಾಪುರ್ ಹರಿದ್ವಾರದ ನಿವಾಸಿ ನದೀಮ್ ಅಲಿ ನೀಡಿದ ದೂರಿನ ಮೇರೆಗೆ ಅವರು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಳೆದ ವರ್ಷ ಡಿಸೆಂಬರ್ 17 ರಿಂದ 19 ರವರೆಗೆ ಹರಿದ್ವಾರದಲ್ಲಿ ಧರ್ಮ ಸಂಸದ್ ಅಥವಾ ಧಾರ್ಮಿಕ ಸಂಸತ್ತನ್ನು ಹಿಂದೂ ಸಾಧುಗಳು ಆಯೋಜಿಸಿದ್ದರು ಮತ್ತು ಈ ಕಾರ್ಯಕ್ರಮದ ಸೋಗಿನಲ್ಲಿ, ಮುಸ್ಲಿಮರ ವಿರುದ್ಧ ಯುದ್ಧ ಮಾಡಲು ಭಾಗವಹಿಸುವವರನ್ನು ಪ್ರಚೋದಿಸುವಂತೆ ತ್ಯಾಗಿ ಮಾತಾಡಿದ್ದರು ಎಂದು ಅವರು ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಪವಿತ್ರ ಕುರಾನ್ ಮತ್ತು ಪ್ರವಾದಿ ಮೊಹಮ್ಮದ್ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಲಾಗಿದೆ ಎಂದು ಅಲಿ ತಮ್ಮ ದೂರಿನಲ್ಲಿ ತಿಳಿಸಿದ್ದು, ಈ ಪ್ರಚೋದನಕಾರಿ ಹೇಳಿಕೆಗಳು ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವೀಡಿಯೊಗಳನ್ನು ತ್ಯಾಗಿ, ಯತಿ ನರಸಿಂಗಾನಂದ್ ಮತ್ತು ಇತರರು ಪ್ರಸಾರ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ಯಾಗಿಗೆ ಸುಪ್ರೀಂ ಕೋರ್ಟ್ ನಿನ್ನೆ ಜಾಮೀನು ವಿಧಿಸಿದೆ