ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಅನಿವಾಸಿ ಭಾರತೀಯರ ವಿರುದ್ಧ ಜನಾಂಗೀಯ ದ್ವೇಷ ವ್ಯಾಪಕವಾಗುತ್ತಿರುವ ಮಧ್ಯೆ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಇದರ ವಿರುದ್ಧ ಅನಿವಾಸಿ ಭಾರತೀಯರು ಟೈಮ್ ಸ್ಕ್ವೇರ್ ಎಂಬಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಹಿಂಸೆ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿದ ಗಾಂಧೀಜಿಯ ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳ ನಡೆಯನ್ನು ವಿರೋಧಿಸಿ ಅನಿವಾಸಿ ಭಾರತೀಯರ ಸಂಘಟನೆಯಾದ ಫೆಡರೇಷನ್ ಆಫ್ ಇಂಡಿಯನ್ ಅಮೆರಿಕನ್ಸ್ (ಎಫ್.ಐ.ಎ) ಮತ್ತು ಇತರ ಭಾರತೀಯ ಸಂಘಟನೆಗಳ ಸಹಕಾರದೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಇಂತಹ ನಡೆಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಪ್ರತಿಭಟನಕಾರರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಇತರ ಸ್ಥಳೀಯ ಸರ್ಕಾರಗಳನ್ನು ಆಗ್ರಹಿಸಿದ್ದಾರೆ.
ಈ ವೇಳೆ ಭಾರತೀಯ ಸಮುದಾಯದ ಸಂರಕ್ಷಣೆಗಾಗಿ ಪ್ರಾಣವನ್ನು ಅರ್ಪಿಸಿದವರಿಗೆ ಗೌರವ ಸಲ್ಲಿಸುವ ಸಲುವಾಗಿ ಮೌನಾಚರಣೆ ಮತ್ತು ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಯಿತು.
ನ್ಯೂಯಾರ್ಕ್ ನಗರದ ದೇವಸ್ಥಾನದ ಮುಂದೆ ಇರಿಸಲಾಗಿದ್ದ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು.