ವಾಷಿಂಗ್ಟನ್: ಇಂಡಿಯನ್ ಅಮೆರಿಕನ್ ಮಾನವಹಕ್ಕು ಒಕ್ಕೂಟದಿಂದ ತೀವ್ರಗೊಂಡ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಜೆರ್ಸಿಯ ಓಲ್ಡ್ ಪ್ಯಾರಾಮಸ್ ರಿಫಾರ್ಮ್ಡ್ ಚರ್ಚ್ನಲ್ಲಿ ನಿಧಿಸಂಗ್ರಹಣೆಗಾಗಿ ಆಯೋಜಿಸಲಾದ ಸಂಘಪರಿವಾರದ ನಾಯಕಿ ಸಾಧ್ವಿ ಋತಂಬರ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
ಸಂಘಪರಿವಾರದ ನಾಯಕಿಯ ಕಾರ್ಯಕ್ರಮ ಮತ್ತು ಸಂಘಟಕರ ವಿರುದ್ಧ ಇಂಡಿಯನ್ ಅಮೆರಿಕನ್ ಒಕ್ಕೂಟದಿಂದ ತೀವ್ರಗೊಂಡ ಪ್ರತಿಭಟನೆಯ ಬಳಿಕ ಈ ಕಾರ್ಯಕ್ರಮವನ್ನು ನಡೆಸಲು ಚರ್ಚ್ ಕಟ್ಟಡವನ್ನು ಬಳಸಲು ನೀಡಲಾದ ಅನುಮತಿಯನ್ನು ಹಿಂಪಡೆದಿರುವುದಾಗಿ ರೆವ್ ರಾಬರ್ಟ್ ಅವರು ತಿಳಿಸಿದ್ದಾರೆ.
ಸಂಘಪರಿವಾರದ ನಾಯಕಿ ಸಾಧ್ವಿ ಋತಂಬರ ಅವರ ಹಿನ್ನೆಲೆಯ ಕುರಿತು ಚರ್ಚ್’ನ ಮುಖ್ಯಸ್ಥರಿಗೆ ತಿಳಿದಿರಲಿಲ್ಲ ಎಂದು ಮಿಲ್ಲರ್ ತಿಳಿಸಿದರು.
ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು, ಅದರಲ್ಲೂ ವಿಶೇಷವಾಗಿ ಮುಸ್ಲಿಮರ ವಿರುದ್ಧ ದ್ವೇಷವನ್ನು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದ ಸಂಘಪರಿವಾರದ ನಾಯಕಿ ಸಾಧ್ವಿ ಋತಂಬರ ಅವರ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್, ಹಿಂದೂಪರ ಮಾನವಹಕ್ಕು ಒಕ್ಕೂಟ ಮತ್ತು ಇತರ ಸಂಸ್ಥೆಗಳು ಆನ್’ಲೈನ್ ಮೂಲಕ ಚರ್ಚ್’ಗೆ ಪತ್ರ ಬರೆಯುವ ಅಭಿಯಾನವನ್ನು ಆಯೋಜಿಸಿದ್ದವು.
ಬಲಪಂಥೀಯ ಸಂಘಟನೆ ಆಯೋಜಿಸಿದ ಸಾಧ್ವಿಯ ಕಾರ್ಯಕ್ರಮಕ್ಕೆ ಚರ್ಚ್ ಕಟ್ಟಡದ ವೇದಿಕೆಯನ್ನು ಬಳಸದಂತೆ ತಡೆದ ಚರ್ಚ್’ನ ಅಧಿಕಾರಿಗಳನ್ನು ಪ್ರಶಂಸಿಸುತ್ತೇವೆ ಎಂಡು ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್ ಸ್ಥಾಪಕ ಸದಸ್ಯರಾದ ಶಾಹೀನ್ ಖತೀಬ್ ತಿಳಿಸಿದ್ದಾರೆ.
ನ್ಯೂಜೆರ್ಸಿಯಲ್ಲಿ ಸಾದ್ವಿ ಋತಂಬರ ಅವರ ಕಾರ್ಯಕ್ರಮದ ವಿರುದ್ಧ ಪ್ರತಿಭಟನೆಗೆ ಚರ್ಚ್ ಮಾಲಕರು, ಸಂಘಟಕರಿಗೆ ನೀಡಿದ್ದ ಅನುಮತಿಯನ್ನು ಹಿಂಪಡೆದ ಬಳಿಕ ಮುಸ್ಲಿಮ್ ಸಂಘಟನೆಯು ತನ್ನ ಪ್ರತಿಭಟನೆಯನ್ನು ವಾಪಸ್ಸು ಪಡೆಯುತ್ತಿರುವುದಾಗಿ ತಿಳಿಸಿದೆ.