ಶಿಲ್ಲಾಂಗ್: ಜೈಲಿನಿಂದ ತಪ್ಪಿಸಿಕೊಂಡಿದ್ದ ಆರು ವಿಚಾರಣಾಧೀನ ಕೈದಿಗಳಲ್ಲಿ ನಾಲ್ವರನ್ನು ಗ್ರಾಮಸ್ಥರು ಹೊಡೆದು ಕೊಂದಿರುವ ಘಟನೆ ಮೇಘಾಲಯದ ಜೈನ್ತಿಯಾ ಹಿಲ್ಸ್ ನ ಶಾಂಗ್ಪುಂಗ್ ಗ್ರಾಮದಲ್ಲಿ ನಡೆದಿದೆ.
ಘಟನೆಯ ಕುರಿತ ವೀಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತಿದ್ದು, ಕೈದಿಗಳನ್ನು ಬಂಧಿಸಿ ಗ್ರಾಮಸ್ಥರು ದೊಣ್ಣೆಗಳಿಂದ ನಿರ್ದಯವಾಗಿ ಹೊಡೆಯುತ್ತಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ.
ಆರು ಕೈದಿಗಳ ಗುಂಪು ಶನಿವಾರ ಜೋವಾಯ್ ಜೈಲಿನಿಂದ ತಪ್ಪಿಸಿಕೊಂಡು ಶಾಂಗ್ಪುಂಗ್ ಪ್ರದೇಶದ ಕಾಡಿನಲ್ಲಿ ಅಡಗಿಕೊಂಡಿದ್ದರು. ಕೈದಿಗಳಲ್ಲಿ ಒಬ್ಬ ಆಹಾರ ಖರೀದಿಸಲು ಸ್ಥಳೀಯ ಚಹಾ ಅಂಗಡಿಗೆ ಹೋದಾಗ ಸ್ಥಳೀಯರು ಗುರುತಿಸಿದ್ದಾರೆ. ಕೈದಿಗಳು ಅರಣ್ಯದಲ್ಲಿ ಇರುವ ವಿಷಯ ಇಡೀ ಗ್ರಾಮಕ್ಕೆ ತಿಳಿದು ಅರಣ್ಯಕ್ಕೆ ಓಡಿಹೋದ ಕೈದಿಗಳನ್ನು ಬೆನ್ನಟ್ಟಿ, ಸೆರೆಹಿಡಿದು ಥಳಿಸಿ ಕೊಂದಿದ್ದಾರೆ.
ಕೈದಿಗಳನ್ನು ಐ ಲವ್ ಯೂ ತಲಾಂಗ್, ರಮೇಶ್ ದಖರ್, ಮರ್ಸಾಂಕಿ ತರಿಯಾಂಗ್, ರಿಕ್ಮೆನ್ಲಾಂಗ್ ಲಾಮಾರೆ, ಶಿಡೋರ್ಕಿ ದಖರ್ ಮತ್ತು ಲೋಡೆಸ್ಟಾರ್ ಟ್ಯಾಂಗ್ ಎಂದು ಗುರುತಿಸಲಾಗಿದೆ.
ದಾಳಿಯಲ್ಲಿ ನಾಲ್ವರು ಕೈದಿಗಳು ಸಾವನ್ನಪ್ಪಿದ್ದು, ಒಬ್ಬ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಆರನೇ ಕೈದಿ ಎಲ್ಲೂ ಕಾಣಿಸಲಿಲ್ಲ ಎಂದು ಗ್ರಾಮದ ಮುಖ್ಯಸ್ಥ ಆರ್ ರಾಬನ್ ತಿಳಿಸಿದ್ದಾರೆ.