ಯುಎಸ್‌ ಓಪನ್‌| ಇತಿಹಾಸ ನಿರ್ಮಿಸಿದ ಕಾರ್ಲೊಸ್‌ ಅಲ್ಕರಾಜ್‌

Prasthutha|

ನ್ಯೂಯಾರ್ಕ್‌: ಸ್ಪೇನ್‌ನ 19 ವರ್ಷದ ಆಟಗಾರ ಕಾರ್ಲೊಸ್‌ ಅಲ್ಕರಾಜ್‌, ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗುವ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. ತನ್ನ ಕಿರಿಯ ಪ್ರಾಯದಲ್ಲೇ ಚೊಚ್ಚಲ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. 1973ರ ಬಳಿಕ ಡಬ್ಲ್ಯು ಟಿಎ ಶ್ರೇಯಾಂಕದಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ನಂ.1 ಸ್ಥಾನಕ್ಕೇರಿದ ದಾಖಲೆ ಅಲ್ಕರಾಜ್‌ ಪಾಲಾಗಿದೆ.

- Advertisement -

ಆರ್ಥರ್‌ ಆ್ಯಶೆ ಕ್ರೀಡಾಂಗಣದಲ್ಲಿ ಭಾನುವಾರ (ಸೆ.11) ತಡರಾತ್ರಿ ನಡೆದ ಫೈನಲ್‌ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕದ ಅಲ್ಕರಾಜ್‌,  ನಾರ್ವೆ ದೇಶದ ಕಾಸ್ಪೆರ್‌ ರುಡ್ ಅವರನ್ನು 6-4, 2-6, 7-6(1), 6-3, ಅಂತರದಲ್ಲಿ ಮಣಿಸಿ ಟೆನಿಸ್‌ ಲೋಕವನ್ನೇ ಬೆರಗಾಗುವಂತೆ ಮಾಡಿದರು.

ಅಲ್ಕರಾಜ್‌  ಮತ್ತು 23 ವರ್ಷದ,  ಐದನೇ ಶ್ರೇಯಾಂಕದ ಕಾಸ್ಪೆರ್‌ ರುಡ್ ಅವರಿಗೂ ಇದು ಚೊಚ್ಚಲ ಗ್ರ್ಯಾಂಡ್‌ ಸ್ಲಾಮ್‌ ಫೈನಲ್‌ ಆಗಿತ್ತು. ರುಡ್‌ ಗೆದ್ದಿದ್ದರೆ ನಂ.1 ಶ್ರೇಯಾಂಕ ಅವರದ್ದಾಗುತ್ತಿತ್ತು. ಸೋಲಿನ ಹೊರತಾಗಿಯೂ ರುಡ್‌, 5ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ.

- Advertisement -

ಅಲ್ಕರಾಜ್‌ – ಕಾಸ್ಪೆರ್‌ ರುಡ್ ನಡುವಿನ ಮೂರನೇ ಮುಖಾಮುಖಿ ಇದಾಗಿದ್ದು. ಮೂರರಲ್ಲೂ ಅಲ್ಕರಾಜ್‌ ಗೆಲುವಿನ ಓಟ ಮುಂದುವರಿಸಿದ್ದಾರೆ. ಎಪ್ರಿಲ್‌ನಲ್ಲಿ ನಡೆದಿದ್ದ ಮಿಯಾಮಿ ಓಪನ್‌ ಟೂರ್ನಿಯ ಫೈನಲ್‌ನಲ್ಲೂ ಕಾರ್ಲೋಸ್‌- ಕಾಸ್ಪೆರ್‌ ಮುಖಾಮುಖಿಯಾಗಿದ್ದರು.

ಪ್ರಸಕ್ತ ವರ್ಷ ಅಲ್ಕರಾಜ್‌ ಗೆಲ್ಲುತ್ತಿರುವ 5ನೇ ಪ್ರಶಸ್ತಿ ಇದಾಗಿದೆ. ಯುಎಸ್‌ ಓಪನ್‌ಗೂ ಮೊದಲು ಮಿಯಾಮಿ, ಮ್ಯಾಡ್ರಿಡ್‌, ಬಾರ್ಸಿಲೋನಾ ಹಾಗೂ ರಿಯೋದಲ್ಲಿ ಸ್ಪೇನ್‌ನ ಯುವ ಆಟಗಾರ ಚಾಂಪಿಯನ್‌ ಆಗಿದ್ದರು. ಹ್ಯಾಂಬರ್ಗ್‌ ಟೂರ್ನಿಯಲ್ಲಿ ಫೈನಲ್‌ ಮತ್ತು ಇಂಡಿಯಾನ ವೇಲ್ಸ್‌ನಲ್ಲಿ ಸೆಮಿಫೈನಲ್‌ ತಲುಪಿದ ಸಾಧನೆ ಮಾಡಿದ್ದರು. 2022ರಲ್ಲಿ ಇದುವರೆಗೂ ಆಡಿದ 60 ಪಂದ್ಯಗಳಲ್ಲಿ ಕೇವಲ 9 ಪಂದ್ಯಗಳಲ್ಲಿ ಮಾತ್ರ ಅಲ್ಕರಾಜ್‌ ಸೋಲು ಕಂಡಿದ್ದಾರೆ. ಅಗ್ರ 10 ಶ್ರೇಯಾಂಕದ ಆಟಗಾರರ ವಿರುದ್ಧ  9-4 ಗೆಲುವಿನ ದಾಖಲೆ ಹೊಂದಿದ್ದಾರೆ. 

ಯುಎಸ್‌ ಓಪನ್‌ ಫೈನಲ್‌ ಪ್ರವೇಶದ ಹಾದಿಯಲ್ಲಿ ಅಲ್ಕರಾಜ್‌, ಸತತ ಮೂರು ಪಂದ್ಯಗಳಲ್ಲಿ ಐದು ಸೆಟ್‌ಗಳ ಹೋರಾಟ ನಡೆಸಿದ್ದರು.  ಆದರೆ ಫೈನಲ್‌ನಲ್ಲಿ 3 ಗಂಟೆ 20 ನಿಮಿಷದಲ್ಲಿ ಕಾಸ್ಪೆರ್‌ ರುಡ್ ಸವಾಲನ್ನು ಹಿಮ್ಮೆಟ್ಟಿಸಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಅಲ್ಕರಾಜ್‌, ಇಟಲಿಯ ಯಾನಿಕ್‌ ಸಿನೆರ್‌ ವಿರುದ್ಧ ಬರೋಬ್ಬರಿ ಐದು ಗಂಟೆ 15 ನಿಮಿಷಗಳ ಸೆಣಸಾಟದ ಬಳಿಕ ಗೆಲುವು ಒಲಿಸಿಕೊಂಡಿದ್ದರು.

ಯುಎಸ್‌ ಓಪನ್‌ನ 141 ವರ್ಷಗಳ ಇತಿಹಾಸದಲ್ಲೇ ಎರಡನೇ ಸುದೀರ್ಘ ಪಂದ್ಯ ಇದಾಗಿತ್ತು. ಇಲ್ಲಿ ಅತ್ಯಂತ ದೀರ್ಘ ಅವಧಿಯ ಪಂದ್ಯ ಆಡಿದ ದಾಖಲೆ ಸ್ಟೀಫನ್‌ ಎಡ್ಬರ್ಗ್ ಮತ್ತು ಮೈಕಲ್‌ ಚಾಂಗ್‌ ಅವರ ಹೆಸರಿನಲ್ಲಿದೆ. 1992 ಟೂರ್ನಿಯಲ್ಲಿ ಇವರು 5 ಗಂಟೆ 26 ನಿಮಿಷ ಆಡಿದ್ದರು. ಸೆಮಿಫೈನಲ್‌ ಪಂದ್ಯದಲ್ಲಿ ಅಲ್ಕರಾಜ್‌, ಅಮೆರಿಕದ ಫ್ರಾನ್ಸಿಸ್ ಟಿಯಾಫೋರನ್ನು ಐದು ಸೆಟ್‌ಗಳ ಮ್ಯಾರಥಾನ್‌ ಹೋರಾಟದಲ್ಲಿ( 6-7(6) 6-3 6-1 6-7(5) 6-3) ಹಿಂದಿಕ್ಕಿ ಫೈನಲ್‌ಗೆ ಅರ್ಹತೆ ಪಡೆದಿದ್ದರು.



Join Whatsapp