ಬೆಂಗಳೂರು: ಗುತ್ತಿಗೆದಾರರು ಬೊಮ್ಮಾಯಿ ಸರ್ಕಾರದ ಮೇಲೆ ಹೊರಿಸಿರುವ 40% ಕಮಿಷನ್ ಆರೋಪದ ಕುರಿತಾಗಿ ಸರ್ಕಾರ ನ್ಯಾಯಾಂಗ ತನಿಖೆ ನಡೆಸಲಿ. ಜೊತೆಗೆ ನಮ್ಮ ಆಡಳಿತಾವಧಿಯಲ್ಲಿ ನಾವು ಕಮಿಷನ್ ಪಡೆದಿದ್ದರೆ ಅದನ್ನೂ ನ್ಯಾಯಾಂಗ ತನಿಖೆಗೆ ಒಳಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಡಿಕೆಶಿ, ಸರ್ಕಾರ ಸಂಭ್ರಮಾಚರಣೆ , ಡ್ಯಾನ್ಸ್ ಮಾಡಿ ಕಾಲಹರಣ ಮಾಡುವ ಬದಲು ತ್ವರಿತ ತನಿಖೆಗೆ ಆದೇಶ ನೀಡಲಿ. ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದು ಮೂರು ವರ್ಷಗಳು ಆಗಿವೆ. ನಾವು ಕಮಿಷನ್ ಪಡೆದಿದ್ದರೆ ಇದುವರೆಗೆ ಯಾಕೆ ತನಿಖೆ ನಡೆಸಿಲ್ಲ, ಬಿಜೆಪಿ ಸರ್ಕಾರ ಮಲಗಿತ್ತಾ ಎಂದು ಪ್ರಶ್ನಿಸಿದರು.
ಬಳಿಕ ರಾಹುಲ್ ಗಾಂಧೀಯ ಭಾರತ್ ಜೋಡೊ ಯಾತ್ರೆ ಬಗ್ಗೆ ಮಾತಾಡಿ, ರಾಹುಲ್ ಗಾಂಧೀ ಯಾತ್ರೆ ಇದೇ ತಿಂಗಳು 30 ರಂದು ರಾಜ್ಯ ಪ್ರವೇಶಿಸಲಿದೆ. ರಾಜ್ಯದಲ್ಲಿ 21 ದಿನ 510 ಕಿಮೀ ಪಾದಯಾತ್ರೆ ನಡೆಯಲಿದೆ. ಗುಂಡ್ಲುಪೇಟೆ ಬಳಿ ಪ್ರವೇಶ ಮಾಡಿ ಬಳ್ಳಾರಿ, ರಾಯಚೂರು ಮೂಲಕ ತೆಲಂಗಾಣಕ್ಕೆ ಹೋಗಲಿದೆ ಎಂದು ಹೇಳಿದರು.