ಎಸಿಬಿಯಲ್ಲಿದ್ದ ಎಲ್ಲಾ ಕಡತಗಳು ಲೋಕಾಯುಕ್ತಕ್ಕೆ ವರ್ಗಾವಣೆ

Prasthutha|

ಬೆಂಗಳೂರು: ರಾಜ್ಯ ಸರ್ಕಾರವು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರದ್ದುಪಡಿಸಿ, ಲೋಕಾಯುಕ್ತ ಬಲವರ್ಧನೆಗೆ ಆದೇಶ ಹೊರಬಿದ್ದ ಬೆನ್ನಲ್ಲೇ ಎಸಿಬಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ‌ (ಎಡಿಜಿಪಿ) ಸೀಮಂತ್ ಕುಮಾರ್ ಸಿಂಗ್ ಅವರು ತಮ್ಮಲ್ಲಿದ್ದ ಎಲ್ಲಾ  ಕಡತಗಳ ವರ್ಗಾವಣೆ ಮಾಡಲು ಸೂಚಿಸಿದ್ದಾರೆ.

- Advertisement -

ಈ ಬೆಳವಣಿಯ ಬೆನ್ನಲ್ಲೇ  ಎಸಿಬಿಯಲ್ಲಿನ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಯು ಅತಂತ್ರಗೊಂಡಿದ್ದು, ಮುಂದೇನು ಮಾಡಬೇಕು ಎನ್ನುವ ಬಗ್ಗೆ ಗೊಂದಲ ಮನೆಮಾಡಿದೆ.

ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸಿಬಿ ಕಚೇರಿಗಳಲ್ಲಿ ಪ್ರಸ್ತುತ 75 ಇನ್​ಸ್ಪೆಕ್ಟರ್​ಗಳು, 45 ಡಿವೈಎಸ್‌ಪಿ, 9 ಮಂದಿ ಎಸ್‌ಪಿ ದರ್ಜೆಯ ಅಧಿಕಾರಿಗಳಿದ್ದಾರೆ. ಇಷ್ಟು ಅಧಿಕಾರಿಗಳಿಗೆ ಸ್ಥಳ ತೋರಿಸುವುದೇ ಗೃಹ ಇಲಾಖೆಗೆ ಕಷ್ಟವಾಗಿದೆ.

- Advertisement -

ಲೋಕಾಯುಕ್ತ ಸಂಸ್ಥೆಯಲ್ಲಿರುವ ಇನ್​ಸ್ಪೆಕ್ಟರ್, ಡಿವೈಎಸ್‌ಪಿ ಹುದ್ದೆಗಳು ಈಗಾಗಲೇ ಭರ್ತಿಯಾಗಿವೆ. ಪೊಲೀಸ್ ಇಲಾಖೆಯ ಇತರ ವಿಭಾಗಗಳಲ್ಲಿ ಹುದ್ದೆಗೆ ತಕ್ಕಷ್ಟು ಅಧಿಕಾರಿಗಳಿದ್ದಾರೆ. ಈ ಸಂದರ್ಭದಲ್ಲಿ ಎಸಿಬಿಯಲ್ಲಿ ಇರುವ ಅಧಿಕಾರಿಗಳಿಗೆ ಸ್ಥಳ ತೋರಿಸುವುದೇ ಸರ್ಕಾರಕ್ಕೆ ಸವಾಲಾಗುತ್ತಿದೆ. ಎಸ್‌ಪಿ ಹುದ್ದೆಯಲ್ಲಿ ಇರುವ ಐಪಿಎಸ್, ಕೆಎಸ್‌ಪಿಎಸ್ ಅಧಿಕಾರಿಗಳನ್ನು ಯಾವುದಾದರೂ ಹುದ್ದೆಗೆ ವರ್ಗಾವಣೆ ಮಾಡಬಹುದು. ಆದರೆ ಇನ್​ಸ್ಪೆಕ್ಟರ್ ಮತ್ತು ಡಿವೈಎಸ್‌ಪಿಗಳಿಗೆ ಸ್ಥಳ ನಿಯುಕ್ತಿ ಮಾಡೋದು ಇಲಾಖೆಗೆ ಸವಾಲಾಗಿದೆ.

ಪೊಲೀಸ್ ಠಾಣಾಧಿಕಾರ:

ಹೈಕೋರ್ಟ್ ಇತ್ತೀಚಿಗೆ ನೀಡಿದ್ದ ತೀರ್ಪಿನ ಪ್ರಮುಖ ಅಂಶಗಳನ್ನು ರಾಜ್ಯ ಸರ್ಕಾರ ಪಾಲಿಸಿದೆ. ಅದರಂತೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರವನ್ನು ರದ್ದುಪಡಿಸಲಾಗಿದೆ. ಲೋಕಾಯುಕ್ತ ಪೊಲೀಸರಿಗೆ ಭ್ರಷ್ಟಾಚಾರ ನಿಗ್ರಹದ ಅಧಿಕಾರ ನೀಡಲಾಗಿದೆ. ಲೊಕಾಯುಕ್ತ ಪೊಲೀಸ್ ವಿಭಾಗಕ್ಕೆ ಪೊಲೀಸ್ ಠಾಣೆಗಳಿಗೆ ಇರುವ ಅಧಿಕಾರವನ್ನು ಕೊಡಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳದಲ್ಲಿ ತನಿಖೆ ಬಾಕಿಯಿರುವ ಎಲ್ಲ ಪ್ರಕರಣಗಳು ಹಾಗೂ ಖಾಸಗಿ ದೂರುಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲು ಸೂಚಿಸಿದೆ.



Join Whatsapp