ಐವರು ಕೆಳ ಅಧಿಕಾರಿಗಳನ್ನೇ ಲಾಕಪ್‌ಗೆ ಹಾಕಿದ ಪೊಲೀಸ್ ವರಿಷ್ಠಾಧಿಕಾರಿ!

Prasthutha|

ಪಾಟ್ನಾ: ಕರ್ತವ್ಯ ತೃಪ್ತಿಕರವಾಗಿಲ್ಲವೆಂದು ತನ್ನ ಐವರು ಕಿರಿಯ ಅಧಿಕಾರಿಗಳನ್ನು ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ಲಾಕಪ್‌ನಲ್ಲಿ ಕೂಡಿ ಹಾಕಿರುವ ಘಟನೆ ಬಿಹಾರದ ನವಾಡ ಪಟ್ಟಣದಲ್ಲಿ ನಡೆದಿದೆ.
ಘಟನೆಯನ್ನು ಪೊಲೀಸ್ ವರಿಷ್ಠಾಧಿಕಾರಿ ನಿರಾಕರಿಸಿದರಾದರೂ, ಈ ಘಟನೆಯ ಸಿಸಿಟಿವಿ ವೀಡಿಯೋ ವೈರಲ್ ಆಗಿದೆ.

- Advertisement -

ಸಿಸಿಟಿವಿ ವೀಡಿಯೋ ಪ್ರಕಾರ ಈ ಘಟನೆ ಸೆ. 8ರಂದು ನಡೆದಿದೆ ಎಂದು ತಿಳಿದುಬಂದಿದ್ದು, ಘಟನೆಗೆ ಕಾರಣರಾದ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಮಂಗ್ಲಾ ಅವರ ವಿರುದ್ಧ ತನಿಖೆ ನಡೆಸಬೇಕೆಂದು ಬಿಹಾರ ಪೊಲೀಸ್ ಅಸೋಸಿಯೇಶನ್‌ನ ಜಿಲ್ಲಾ ಘಟಕ ಆಗ್ರಹಿಸಿದೆ.

ವೈರಲ್ ಆದ ಠಾಣೆಯ ಸಿಸಿಟಿ ದೃಶ್ಯದ ಪ್ರಕಾರ, ಸಬ್ ಇನ್‌ಸ್ಪೆಕ್ಟರ್‌ಗಳಾದ ಶತ್ರುಘ್ನ ಪಾಸ್ವಾನ್, ರಾಮ್‌ರೇಖಾ ಸಿಂಗ್, ಅಸಿಸ್ಟಂಟ್ ಸಬ್ ಇನ್‌ಸ್ಪೆಕ್ಟರ್‌ಗಳಾದ ಸಂತೋಷ್ ಪಾಸ್ವಾನ್, ಸಂಜಯ್ ಸಿಂಗ್ ಮತ್ತು ರಾಮೇಶ್ವರ್ ಅರೋನ್‌ರನ್ನು ಕರ್ತವ್ಯ ಲೋಪ ಆರೋಪಿಸಿ ಲಾಕಪ್‌ನೊಳಗೆ ಕೂಡಿಹಾಕಲಾಗಿತ್ತು. ಎರಡು ಗಂಟೆಯ ಬಳಿಕ ಅವರನ್ನು ಲಾಕಪ್‌ನಿಂದ ಹೊರಬಿಡಲಾಗಿದೆಯೆಂದು ತಿಳಿದು ಬಂದಿದೆ.

- Advertisement -

ಮೂಲಗಳ ಪ್ರಕಾರ, ಸೆ. 8ರಂದು ರಾತ್ರಿ ಸುಮಾರು 9 ಗಂಟೆಗೆ ಪೊಲೀಸ್ ವರಿಷ್ಠಾಧಿಕಾರಿ ಈ ಠಾಣೆಗೆ (ನವಾಡ ನಗರ ಠಾಣೆ) ಭೇಟಿ ನೀಡಿದ್ದರು. ಈ ವೇಳೆ ಕೆಲ ಅಧಿಕಾರಿಗಳು ಕರ್ತವ್ಯ ಲೋಪ ನಡೆಸಿದ್ದು ಕಂಡು ಬಂದಿದ್ದು, ಇದರಿಂದ ಆಕ್ರೋಶಗೊಂಡ ವರಿಷ್ಠಾಧಿಕಾರಿ ಅವರನ್ನು (ಐವರನ್ನು) ಲಾಕಪ್‌ಗೆ ಹಾಕಲು ಸೂಚಿಸಿದ್ದರೆಂದು ತಿಳಿದುಬಂದಿದೆ. ಆದರೆ ಈ ಪೊಲೀಸರು ನಡೆಸಿದ ಕರ್ತವ್ಯಲೋಪ ಏನೆಂದು ಮೂಲಗಳು ತಿಳಿಸಿಲ್ಲ.

ಆದರೆ ಪೊಲೀಸ್ ವರಿಷ್ಠಾಧಿಕಾರಿ ಈ ಘಟನೆಯನ್ನು ನಿರಾಕರಿಸಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದೆ ಎಂದಿದ್ದಾರೆ. ಇನ್ನು ಠಾಣಾಧಿಕಾರಿ ವಿಜಯ ಕುಮಾರ್ ಸಿಂಗ್ ವರಿಷ್ಠಾಧಿಕಾರಿ ಹೇಳಿಕೆಗೆ ಧ್ವನಿಗೂಡಿಸಿದ್ದಾರೆ.

Join Whatsapp