ಪಾಟ್ನಾ: ಪ್ರಸಕ್ತ ಅಸ್ತಿತ್ವದಲ್ಲಿರುವ ಎಲ್ಲಾ ವಿರೋಧ ಪಕ್ಷಗಳು ಐಕ್ಯತೆಯೊಂದಿಗೆ 2024ರ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುವ ಮೂಲಕ ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಆರ್.ಜೆ.ಡಿ ಮುಖಂಡ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಬಿಜೆಪಿಯನ್ನು ಸೋಲಿಸಲು ಯಶಸ್ವಿಯಾಗುತ್ತೇವೆ ಎಂದು ತಿಳಿಸಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿರೋಧ ಪಕ್ಷದ ನಾಯಕರೊಂದಿಗೆ ನಡೆದ ಸಭೆಯ ಬಳಿಕ ತೇಜಸ್ವಿ ಯಾದವ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದು, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ದೇಶದ ಹಲವು ವಿಪಕ್ಷ ನಾಯಕರಾದ ರಾಹುಲ್ ಗಾಂಧಿ, ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ಸೀತಾರಾಮ್ ಯಚೂರಿ ಮತ್ತು ಅರವಿಂಗ್ ಕೇಜ್ರಿವಾಲ್, ಓಂ ಪ್ರಕಾಶ್ ಚೌಟಾಲಾ, ಶರದ್ ಯಾದವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಮಧ್ಯೆ ಮುಂಬರುವ ಚುನಾವಣೆಯಲ್ಲಿ ನಿತೀಶ್ ಕುಮಾರ್, ಹೇಮಂತ್ ಸೊರೇನ್ ಮತ್ತು ಇತರ ವಿಪಕ್ಷ ನಾಯಕರ ಜೊತೆ ಮೈತ್ರಿ ನಡೆಸಲಿದ್ದೇವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.