ಕಾಂಗ್ರೆಸ್ ಪಕ್ಷದ ಮುಖ್ಯಸ್ಥರ ಚುನಾವಣೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆಯ ಬಗ್ಗೆ ಕಳವಳ : ಐವರು ಸಂಸದರಿಂದ ಪತ್ರ

Prasthutha|

ನವದೆಹಲಿ: ಕಾಂಗ್ರೆಸ್ ಪಕ್ಷದ ಮುಖ್ಯಸ್ಥರ ಆಯ್ಕೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಬಗ್ಗೆಕಳವಳ ವ್ಯಕ್ತಪಡಿಸಿ ಅದೇ ಪಕ್ಷದ ಐವರು ಸಂಸದರು ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಅವರಿಗೆ ಪತ್ರ ಬರೆದಿದ್ದಾರೆ.

- Advertisement -

ಮತದಾರರ ಪಟ್ಟಿ ರೂಪಿಸುವ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರತಿನಿಧಿಗಳ ಪಟ್ಟಿಯನ್ನು ಎಲ್ಲಾ ಮತದಾರರು ಮತ್ತು ಸಂಭಾವ್ಯ ಅಭ್ಯರ್ಥಿಗಳಿಗೆ ಒದಗಿಸುವಂತೆ ಸಂಸದರು ಕೋರಿದ್ದಾರೆ.

ಸೆಪ್ಟೆಂಬರ್ 6 ರಂದು ಮಿಸ್ತ್ರಿ ಅವರಿಗೆ ಬರೆದ ಜಂಟಿ ಪತ್ರದಲ್ಲಿ, ಕಾಂಗ್ರೆಸ್ ನ ಲೋಕಸಭಾ ಸದಸ್ಯರಾದ ಶಶಿ ತರೂರ್, ಮನೀಶ್ ತಿವಾರಿ, ಕಾರ್ತಿ ಚಿದಂಬರಂ, ಪ್ರದ್ಯುತ್ ಬೋರ್ಡೊಲೋಯಿ ಮತ್ತು ಅಬ್ದುಲ್ ಖಾಲಿಕ್ ಅವರು, ಯಾರು ನಾಮನಿರ್ದೇಶನ ಮಾಡಲು ಅರ್ಹರು ಮತ್ತು ಯಾರು ಮತ ಚಲಾಯಿಸಲು ಅರ್ಹರು ಎಂಬುದನ್ನು ಪರಿಶೀಲಿಸಲು ಈ ಪಟ್ಟಿಯನ್ನು ಲಭ್ಯಗೊಳಿಸಬೇಕು ಎಂದು ತಿಳಿಸಿದ್ದಾರೆ.

- Advertisement -

ಮತದಾರರ ಪಟ್ಟಿ ಪರಿಶೀಲನೆಗಾಗಿ ಮತದಾರರು ಮತ್ತು ಅಭ್ಯರ್ಥಿಗಳು ಎಲ್ಲ 28 ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡುವುದು ಸಾಧ್ಯವಾಗದು ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದೆ. ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದೆ ಎಂದು ಪಕ್ಷವು ಈಗಾಗಲೇ ತಿಳಿಸಿದೆ.



Join Whatsapp