ಬೆಂಗಳೂರು: ಕಳೆದೆರಡು ಬಾರಿ ಮುಂದೂಡಿಕೆಯಾಗಿದ್ದ ಬಿಜೆಪಿಯ ಜನಸ್ಪಂದನ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಪೂರ್ಣಗೊಂಡಿದ್ದು ಇಂದು ದೊಡ್ಡಬಳ್ಳಾಪುರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರಯಲಿದೆ.
ಇಂದು ಪೂರ್ವಾಹ್ನ 12 ಗಂಟೆಗೆ ಆರಂಭಗೊಳ್ಳಲಿರುವ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಭಾಗಿಯಾಗಲಿದ್ದು 3 ಲಕ್ಷ ಜನ ಸೇರುವ ನಿರೀಕ್ಷೆಯಿದೆ ಎನ್ನಲಾಗಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರದಿಂದ ಬರುವ ಎಲ್ಲಾ ಜನರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದ್ದು ಸ್ವತ: ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಆಗಿರುವ ಡಾ.ಕೆ.ಸುಧಾಕರ್ ಅವರೇ ಕಾರ್ಯಕ್ರಮದ ಮೇಲ್ವಿಚಾರಣೆ ವಹಿಸಿದ್ದಾರೆ.
ವೇದಿಕೆಯಲ್ಲಿ 90 ಮುಖಂಡರಿಗೆ ಮಾತ್ರ ಆಸನ ಸಿದ್ದಪಡಿಸಲಾಗಿದ್ದು, ದೂರದೂರಿನಿಂದ ಬರುವವರಿಗೆ ಊಟಕ್ಕಾಗಿ ವೇದಿಕೆಯ ಬಲಭಾಗದಲ್ಲೇ 300 ಕೌಂಟರ್ ತೆರೆಯಲಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತಾಡಿದ ಡಾ ಕೆ ಸುಧಾಕರ್ , ಇದು ವ್ಯಕ್ತಿ ಉತ್ಸವ ಅಲ್ಲ , ಪಕ್ಷದ ಉತ್ಸವವೂ ಅಲ್ಲ ಜನರ ಉತ್ಸವ. ಜನಪರ ಆಡಳಿತದ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಪಕ್ಷದ ಪ್ರಣಾಳಿಕೆ ಜಾರಿಗೆ ತರುವ ಯೋಜನೆಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಿದರು.