ನವದೆಹಲಿ: ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಗೆ ತನ್ನ ಆಡಳಿತದ ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ಡಿಸೆಂಬರ್ ಒಳಗೆ ಚುನಾವಣೆ ನಡೆಯದಿದ್ದರೆ ವಿಶ್ವ ಕ್ರೀಡಾ ಸಂಸ್ಥೆ ಭಾರತವನ್ನು ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅನ್ನು ಆವರಿಸಿರುವ ಆಂತರಿಕ ವಿವಾದಗಳು, ಆಡಳಿತದ ಕೊರತೆಗಳು ಮತ್ತು ನಡೆಯುತ್ತಿರುವ ನ್ಯಾಯಾಲಯ ಪ್ರಕರಣಗಳ ಕಾರಣದಿಂದಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ 2023 ರ ಮೇ ತಿಂಗಳಿನಲ್ಲಿ ಮುಂಬೈಯಲ್ಲಿ ನಡೆಯಬೇಕಿದ್ದ ತನ್ನ ವಾರ್ಷಿಕ ಅಧಿವೇಶನವನ್ನು ಮುಂದೂಡಿದೆ.
ಮೇ ತಿಂಗಳಲ್ಲಿ ನಡೆಯಲಿರುವ ಮುಂದಿನ ಕಾರ್ಯಕಾರಿ ಮಂಡಳಿ ಸಭೆಗೆ ಮುಂಚಿತವಾಗಿ ಚುನಾವಣೆಗಳನ್ನು ನಡೆಸಲು ಮತ್ತು ‘ಎಲ್ಲಾ ಆಡಳಿತ ಸಮಸ್ಯೆಗಳನ್ನು’ ಪರಿಹರಿಸಲು ವಿಫಲವಾದರೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅನ್ನು ತಕ್ಷಣವೇ ಅಮಾನತುಗೊಳಿಸ ಬೇಕಾಗುತ್ತದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಂತಿಮ ಗಡುವು ನೀಡಿದೆ.
ಒಲಿಂಪಿಕ್ ಒಗ್ಗಟ್ಟು ಮತ್ತು ರಾಷ್ಟ್ರೀಯ ಒಲಿಂಪಿಕ್ ಸಮಿತಿ ಸಂಬಂಧಗಳ ನಿರ್ದೇಶಕ ಜೇಮ್ಸ್ ಮ್ಯಾಕ್ಲಿಯೋಡ್ ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರಿಗೆ ಬರೆದ ಪತ್ರದಲ್ಲಿ, ಐಒಎಯನ್ನು ಅಮಾನತುಗೊಳಿಸುವುದರಿಂದ, ‘ಭಾರತದ ಕ್ರೀಡಾಪಟುಗಳು ಇನ್ನು ಮುಂದೆ ದೇಶವನ್ನು ಪ್ರತಿನಿಧಿಸಲು ಮತ್ತು ಒಲಿಂಪಿಕ್ ಕ್ರೀಡಾಕೂಟ ಮತ್ತು ಇತರ ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ದೇಶದ ಹೆಸರಿನಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.