ನವದೆಹಲಿ: ಸರ್ಕಾರಿ ನೌಕರರ ಭ್ರಷ್ಟಾಚಾರವು ಸರ್ಕಾರ ಮತ್ತು ಸಮಾಜದ ವಿರುದ್ಧ ನಡೆಸುವ ಅಪರಾಧ. ಇಂಥ ಪ್ರಕರಣಗಳಲ್ಲಿ ಲಂಚ ಕೊಟ್ಟವರು ಕೇಸು ವಾಪಾಸು ಪಡೆದುಕೊಂಡ ಅಥವಾ ಒಪ್ಪಂದ ಮಾಡಿಕೊಂಡ ತಕ್ಷಣಕ್ಕೆ ಪ್ರಕರಣವನ್ನು ವಜಾ ಮಾಡಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತು.
ಸರ್ಕಾರಿ ನೌಕರರ ಭ್ರಷ್ಟಾಚಾರವು ಸರ್ಕಾರ ಮತ್ತು ಸಮಾಜದ ವಿರುದ್ಧದ ದ್ರೋಹ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಧಿಕಾರ ದುರುಪಯೋಗ ಮತ್ತು ಭ್ರಷ್ಟ ವಿಧಾನಗಳನ್ನು ಅನುಸರಿಸುವ ಪ್ರಕರಣಗಳನ್ನು ‘ವಿಶೇಷ ಆದ್ಯತೆಯ ಪ್ರಕರಣ’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಲಂಚ ಪಡೆದ ಹಣವನ್ನು ಮರಳಿಸಿದ ತಕ್ಷಣಕ್ಕೆ, ಲಂಚ ಕೊಟ್ಟವರು ದೂರು ಹಿಂಪಡೆದರೆ ಅಪರಾಧಿಗೆ ಶಿಕ್ಷೆ ಆದಂತೆ ಆಗುವುದಿಲ್ಲ ಎಂದು ನ್ಯಾಯಾಲಯವು ಚಾಟಿ ಬೀಸಿದೆ.
ಆರೋಪಿ ಮತ್ತು ಆಪಾದಿತರು ಒಪ್ಪಂದ ಮಾಡಿಕೊಂಡರು ಎಂದಾಕ್ಷಣ ಪ್ರಕರಣವನ್ನು ರದ್ದುಪಡಿಸಿದ ಮದ್ರಾಸ್ ಹೈಕೋರ್ಟ್ ನ ತೀರ್ಪನ್ನು ವಜಾ ಮಾಡಿದ ನಂತರ, ಕ್ರಿಮಿನಲ್ ಪ್ರಕರಣಗಳನ್ನು ಹೀಗೆಲ್ಲಾ ಇತ್ಯರ್ಥಪಡಿಸಿಕೊಳ್ಳಲು ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಕಟುವಾಗಿ ಹೇಳಿದೆ.
ಈ ಮೂಲಕ ಲಂಚ ಪಡೆಯುವುದು ಕ್ರಿಮಿನಲ್ ಅಪರಾಧ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಸರಕಾರಿ ನೌಕರರಾಗಿದ್ದುಕೊಂಡು ಭ್ರಷ್ಟಾಚಾರ ನಡೆಸುವುದು ಮಹಾ ಅಪರಾಧ ಎಂದು ಒತ್ತಿ ಹೇಳಿದೆ.