ನವದೆಹಲಿ: ರಾಷ್ಟ್ರಗೀತೆ, ರಾಷ್ಟ್ರಧ್ವಜದಂತೆ ದೇಶದಲ್ಲಿ ಶೀಘ್ರದಲ್ಲೇ ರಾಷ್ಟ್ರ ಪುಸ್ತಕ ಬರಲಿದ್ದು, ಕೇಂದ್ರ ಸರ್ಕಾರವು ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವೆಂದು ಘೋಷಿಸುವ ಚಿಂತನೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ವಿವಿಧ ಸಚಿವಾಲಯಗಳಿಂದ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದು, ಮಹಾರಾಷ್ಟ್ರದ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಅವರು ಕಳುಹಿಸಿದ ಪತ್ರದ ಆಧಾರದ ಮೇಲೆ ಸರ್ಕಾರ ಈ ಕಾರ್ಯವನ್ನು ಅನುಷ್ಠಾನಗೊಳಿಸುವ ಯೋಚನೆಯಲ್ಲಿದೆ.
ಜುಲೈ 5 ರಂದು ಮಹಾರಾಷ್ಟ್ರದ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ , ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಪತ್ರ ಬರೆದಿದ್ದು, ಶ್ರೀಮದ್ ಭಗವದ್ಗೀತೆಯನ್ನು ರಾಷ್ಟ್ರೀಯ ಧರ್ಮಗ್ರಂಥವಾಗಿ ಘೋಷಿಸುವಂತೆ ಗೃಹ ಸಚಿವರನ್ನು ಒತ್ತಾಯಿಸಿದ್ದರು. ಗೃಹ ಸಚಿವ ಶಾ ಅವರು ಜುಲೈ 18 ರಂದು ಈ ಪತ್ರಕ್ಕೆ ಉತ್ತರ ಕಳುಹಿಸಿದ್ದು, ತಮ್ಮ ಪತ್ರವನ್ನು ಅಗತ್ಯ ಕ್ರಮಕ್ಕಾಗಿ ಸಂಬಂಧಪಟ್ಟ ಸಚಿವಾಲಯಗಳಿಗೆ ಕಳುಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಗೃಹ ಸಚಿವಾಲಯವು ಈ ವಿಷಯದಲ್ಲಿ ಶಿಕ್ಷಣ ಸಚಿವಾಲಯದ ಅಭಿಪ್ರಾಯವನ್ನು ಕೇಳಿದೆ. ಶ್ರೀಮದ್ ಭಗವದ್ಗೀತೆಯನ್ನು ರಾಷ್ಟ್ರೀಯ ಧರ್ಮಗ್ರಂಥವಾಗಿ ಘೋಷಿಸುವ ಬಗ್ಗೆ ಶಿಕ್ಷಣ ಸಚಿವಾಲಯವು ಆಗಸ್ಟ್ 10 ರಂದು ತನ್ನ ಹೇಳಿಕೆಗಳನ್ನು ಕಳುಹಿಸಿದೆ ಎನ್ನಲಾಗಿದೆ. ಇದರ ನಂತರ, ಗೃಹ ವ್ಯವಹಾರಗಳ ಸಚಿವಾಲಯವು ಈಗ ಶ್ರೀಮದ್ ಭಗವದ್ಗೀತೆಯನ್ನು ರಾಷ್ಟ್ರೀಯ ಪುಸ್ತಕವಾಗಿ ಘೋಷಿಸುವ ಬಗ್ಗೆ ಸಂಸ್ಕೃತಿ ಸಚಿವಾಲಯದ ಅಭಿಪ್ರಾಯವನ್ನು ಕೇಳಿದ್ದು,ಅಲ್ಲಿಂದಲೂ ಸಕರಾತ್ಮಕ ಪ್ರತಿಕ್ರಿಯೆ ದೊರಕಿದೆ ಎಂಬ ಮಾಹಿತಿ ದೊರಕಿದೆ.