ಏಷ್ಯಾ ಕಪ್‌| ಗೆಲುವಿನ ವಿದಾಯದ ನಿರೀಕ್ಷೆಯಲ್ಲಿ ಭಾರತ, ರೋಹಿತ್‌ ಬದಲು ರಾಹುಲ್‌ ನಾಯಕ

Prasthutha|

ದುಬೈ: ಏಷ್ಯಾ ಕಪ್‌ ಟೂರ್ನಿಯ ಸೂಪರ್‌-4 ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಗುರುವಾರ ಭಾರತ-ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿದೆ. ಟಾಸ್‌ ಗೆದ್ದ ಅಫ್ಘಾನ್‌ ನಾಯಕ ಮುಹಮ್ಮದ್‌ ನಬಿ, ಟೀಮ್‌ ಇಂಡಿಯಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ. ನಾಯಕ ರೋಹಿತ್‌ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ನಾಯಕತ್ವ ಜವಬ್ಧಾರಿ ಕೆ.ಎಲ್‌ ರಾಹುಲ್‌ ಹೆಗಲೇರಿದೆ. 

- Advertisement -

ಟೀಮ್‌ ಇಂಡಿಯಾದಲ್ಲಿ ಮೂರು ಬದಲಾವಣೆ ಮಾಡಲಾಗಿದ್ದು, ದಿನೇಶ್ ಕಾರ್ತಿಕ್‌, ಅಕ್ಷರ್‌ ಪಟೇಲ್‌ ಹಾಗೂ ದೀಪಕ್‌ ಚಾಹರ್‌ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಬುಧವಾರ ಪಾಕಿಸ್ತಾನದ ವಿರುದ್ಧ ಆಡಿದ್ದ ತಂಡವನ್ನೇ ಅಪ್ಘಾನಿಸ್ತಾನ ಕಣಕ್ಕಿಳಿಸಿದೆ.

ಏಷ್ಯಾ ಕಪ್‌ ಟೂರ್ನಿಯ ಫೈನಲ್‌ ಫೈಟ್‌ನಿಂದ ಎರಡೂ ತಂಡಗಳು ಈಗಾಗಲೇ ಅಧಿಕೃತವಾಗಿ ಹೊರಬಿದ್ದಿವೆ. ಅದಾಗಿಯೂ ʻಸಮಾಧಾನಕರ ಜಯʼದ ಮೂಲಕ ಟೂರ್ನಿಗೆ ವಿದಾಯ ಹೇಳಲು ಉಭಯ ತಂಡಗಳು, ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಕಣಕ್ಕಿಳಿದಿವೆ. 

- Advertisement -

ಸೂಪರ್‌-4 ಹಂತದ ತನ್ನ ಮೊದಲೆರಡು ಪಂದ್ಯಗಳಲ್ಲಿ ಮುಗ್ಗರಿಸಿದ ಟೀಮ್‌ ಇಂಡಿಯಾ, ಫೈನಲ್‌ ತಲುಪುವ ಸಣ್ಣ ಭರವಸೆ ಉಳಿಸಿಕೊಂಡಿತ್ತು. ಆದರೆ ಬುಧವಾರ ಶಾರ್ಜಾ ಮೈದಾನದಲ್ಲಿ ನಡೆದಿದ್ದ ಜಿದ್ದಾಜಿದ್ದಿನ ಕದನದಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಂತಿಮ ಓವರ್‌ನಲ್ಲಿ ಪಾಕಿಸ್ತಾನ ಗೆಲುವಿನ ಬಾವುಟ ಹಾರಿಸಿತ್ತು. ಆ ಮೂಲಕ ಅಧಿಕೃತವಾಗಿ ಟೂರ್ನಿಯಿಂದ ಹೊರನಡೆದಿದೆ. ಮತ್ತೊಂದೆಡೆ  ಅಫ್ಘಾನಿಸ್ತಾನ ತಂಡವೂ ಸಹ ತನ್ನ ಮೊದಲೆರಡು ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳಿಗೆ ಶರಾಣಾಗಿತ್ತು.

ಟೂರ್ನಿಯಿಂದ ಹೊರಬಿದ್ದ ಹೊರತಾಗಿಯೂ  ಈ ಬಾರಿಯ ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ತೋರಿದ ಹೋರಾಟದ ಕಿಚ್ಚು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಲೀಗ್‌ ಹಂತದ ಮೊದಲ ಪಂದ್ಯದಲ್ಲಿ ಲಂಕಾ ತಂಡವನ್ನು ಕೇವಲ 105 ರನ್‌ಗಳಿಗೆ ಆಲೌಟ್‌ ಮಾಡಿದ್ದ ಮುಹಮ್ಮದ್‌ ನಬಿ ಪಡೆ, 2 ವಿಕೆಟ್‌ ನಷ್ಟದಲ್ಲಿ 10.1 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತ್ತು. ಆ ಬಳಿಕ ಬಾಂಗ್ಲಾದೇಶ ತಂಡವನ್ನು ಸಹ 7 ವಿಕೆಟ್‌ ಅಂತರದಲ್ಲಿ ಸೋಲಿಸಿ ಸೂಪರ್‌-4 ಹಂತ ಪ್ರವೇಶಿಸಿತ್ತು.

ಸೂಪರ್‌-4 ಹಂತದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡದ ವಿರುದ್ಧ ಅಂತಿಮ ಓವರ್‌ವರೆಗೂ ಹೋರಾಡಿ ಶರಣಾಗಿದ್ದ ಅಪ್ಘಾನಿಸ್ತಾನ ಗುರುವಾರದ ಪಂದ್ಯದಲ್ಲಿ ಭಾರತಕ್ಕೆ ಸವಾಲೊಡ್ಡಲು ಸನ್ನದ್ಧವಾಗಿದೆ. ವಿಶ್ವದರ್ಜೆಯ ಬೌಲಿಂಗ್‌ ತಂಡದ ಪ್ರಧಾನ ಬಲವಾಗಿದೆ. ಬ್ಯಾಟಿಂಗ್‌ನಲ್ಲೂ ರೆಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝರ್ದಾನ್‌ ತಂಡಕಕೆ ನೆರವಾಗುತ್ತಿದ್ದಾರೆ.



Join Whatsapp