ಎನ್ಐಎ ದಾಳಿಗೆ ಹೆದರಲು ನಾವು ಸಾವರ್ಕರ್ ಸಂತತಿಯಲ್ಲ, ನಾವು ಟಿಪ್ಪು ಸಂತತಿ : PFI ತಿರುಗೇಟು

Prasthutha|

ದಕ್ಷಿಣ ಕನ್ನಡದಲ್ಲಿ NIA ದಾಳಿ ವಿರೋಧಿಸಿ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

- Advertisement -

ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆಯಿಂದ ಆಕ್ರೋಶಗೊಂಡಿದ್ದ ಹಿಂದೂ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಬಿಜೆಪಿ ಸರ್ಕಾರ ರಾಷ್ಟ್ರೀಯ ತನಿಖಾ ದಳವನ್ನು ಪಿಎಫ್ಐನವರ ಮನೆಗೆ ಕಳಿಸಿದ್ದಾರೆ ಎಂದು ಪಿಎಫ್ಐ ರಾಜ್ಯ ಕಾರ್ಯದರ್ಶಿ ಎ.ಕೆ ಅಶ್ರಫ್ ಹೇಳಿದ್ದಾರೆ. ದಕ್ಷಿಣ ಕನ್ನಡದ ಹಲವೆಡೆ ನಡೆದ ಎನ್ಐಎ ದಾಳಿ ವಿರೋಧಿಸಿ ಯುಎಪಿಎ ಕಾಯ್ದೆ ವಿರೋಧಿ ಹೋರಾಟ ಸಮಿತಿಯವರು ಮಂಗಳೂರಿನ ಕ್ಲಾಕ್ ಟವರ್ ಬಳಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಮತ್ತು ಬಿಜೆಪಿಯವರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಯಂತ್ರಿಸಲು ಸಾಧ್ಯವಾಗದ್ದಕ್ಕೆ ತನಿಖಾ ಸಂಸ್ಥೆಯಾದ ಎನ್ಐಎ ಅನ್ನು ಪಿಎಫ್ಐ ಮೇಲೆ ಛೂ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಎನ್ಐಎ ದಾಳಿ ಮೂಲಕ ಪಾಪ್ಯುಲರ್ ಫ್ರಂಟ್ ಇಂಡಿಯಾ ಸಂಘಟನೆಯನ್ನು ಹೆದರಿಸಲು ಸಾಧ್ಯವಿಲ್ಲ . ನಮ್ಮ ಪ್ರಾಣವನ್ನು ತೆಗೆಯಬಹುದು, ಆದರೆ ನಮ್ಮನ್ನು ಮಂಡಿಯೂರಿಸಲು ನಿಮಗೆ ಸಾಧ್ಯವಿಲ್ಲ ಎಂದು ಅಶ್ರಫ್ ಸವಾಲು ಹಾಕಿದರು. ನಮ್ಮ ಪೂರ್ವಜರು ಫರೋವಾ, ನಮ್ರೂದ್, ಅಬೂಜಹನ ವಿರುದ್ಧ ಮಂಡಿಯೂರಿಲ್ಲ, ನಾವು ಆರ್ ಎಸ್ ಎಸ್ ವಿರುದ್ಧ ಮಂಡಿಯೂರಲ್ಲ, ಫ್ಯಾಶಿಸಂನ ಕಿರುಕುಳಕ್ಕೆ ನಾವು ಬಗ್ಗುವವರಲ್ಲ, ಧೈರ್ಯದಿಂದ ಎದುರಿಸುವ ತಾಕತ್ತು ಪ್ರತಿಯೊಬ್ಬ ಕಾರ್ಯಕರ್ತನಿಗೂ ಇದೆ ಎಂದು ಎಚ್ಚರಿಕೆ ನೀಡಿದರು.

- Advertisement -

ದಕ್ಷಿಣ ಕನ್ನಡದಲ್ಲಿ 30 ಮನೆಗಳ ಮೇಲೆ ದಾಳಿ ನಡೆಸಿದ ಬಳಿಕವೂ ಮುಸ್ಲಿಂ ಸಮುದಾಯ ಮತ್ತು ಪಿಎಫ್ಐ ಸಂಘಟನೆ ಸ್ವಲ್ಪವೂ ಹೆದರದೆ ಮಂಗಳೂರಲ್ಲಿ ಪ್ರತಿಭಟನೆ ನಡೆಸುತ್ತಿದೆ, ಎನ್ಐಎ ದಾಳಿಗೆ ಹೆದರಲು ಮುಸ್ಲಿಮರ ಮೈಯಲ್ಲಿರುವುದು ಸಾವರ್ಕರ್ ರಕ್ತವಲ್ಲ, ನಮ್ಮದು ಟಿಪ್ಪು ರಕ್ತ ಎಂಬುದನ್ನು ಪ್ರಭುತ್ವ ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕೊಲೆಯಾದ ಫಾಝಿಲ್ ತಂದೆ, ಮಸೂದ್ ತಾಯಿಯ ಕಣ್ಣೀರಿನ ಶಾಪ ತಟ್ಟುವ ಮೊದಲು ಎನ್ಐಎನವರು ಜಿಲ್ಲೆಯನ್ನು ಬಿಟ್ಟುಹೋಗಿ ಎಂದು ಮನವಿ ಮಾಡಿದರು. ಮರಳಿ ಹೋಗುವಾಗ ದಕ್ಷಿಣ ಕನ್ನಡದ ಕಡಬದಲ್ಲಿರುವ ಬಾಂಬ್ ಸ್ಫೋಟದ ಆರೋಪಿಯಾಗಿರುವಾಗ ಜಯಪ್ರಕಾಶ್ ಬೆಳ್ವಡ ಎಂಬ ಭಯೋತ್ಪಾದಕನ ಮನೆಗೆ ಭೇಟಿ ನೀಡಿ ಎಂದು ಎನ್ಐಎ ಅಧಿಕಾರಿಗಳಿಗೆ ಮಾತಿನಲ್ಲೇ ಕುಟುಕಿದರು. 2014ರ ಮುಂಚೆ ಭಯೋತ್ಪಾದಕರು, ಭ್ರಷ್ಟರು, ಅಕ್ರಮಿಗಳ ಮೇಲೆ ದಾಳಿ ನಡೆಸುತ್ತಿದ್ದ ತನಿಖಾ ತಂಡಗಳಿಗೆ ಒಂದು ಗೌರವ ಇತ್ತು. ಆದರೆ 2014ರ ಬಳಿಕ ಸೈದ್ಧಾಂತಿಕ ವಿರೋಧಿಗಳು ಮತ್ತು ಮುಸ್ಲಿಂ ಸಮುದಾಯವನ್ನು ಗುರಿಮಾಡಿ ಆರ್ ಎಸ್ ಎಸ್ ನ ಗುಲಾಮ ಥರ ಕೆಲಸ ಮಾಡುತ್ತಿರುವ ತನಿಖಾ ಸಂಸ್ಥೆಗಳು ತಮ್ಮ ಮೇಲಿದ್ದ ಗೌರವ, ನಂಬಿಕೆಯನ್ನು ಹಾಳುಮಾಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್ ಎಸ್ ಎಸ್ ಕೇವಲ ಪಿಎಫ್ಐ ಸಂಘಟನೆಯನ್ನು ಮಾತ್ರ ಗುರಿಮಾಡಿಲ್ಲ, ಅವರು ಮುಸ್ಲಿಂ ಸಮುದಾಯವನ್ನು ಗುರಿಮಾಡಿದ್ದು, ದೇಶದಲ್ಲಿ ಮುಸ್ಲಿಮರ ಸಾಮೂಹಿಕ ಹತ್ಯಾಕಾಂಡ ನಡೆಸಲು ಸಂಚು ಮಾಡಿದ್ದಾರೆ ಎಂದು ಆರೋಪಿಸಿದ ಎ.ಕೆ ಅಶ್ರಫ್, ಆರ್ ಎಸ್ ಎಸ್ ವಿರುದ್ಧ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮಹಿಳಾ ಹೋರಾಟಗಾರ್ತಿ ಶಾಹಿದಾ ತಸ್ಲೀಮ್ , ರಾಷ್ಟ್ರೀಯ ತನಿಖಾ ದಳ ಬಿಜೆಪಿ ಸರ್ಕಾರದ ಗುಲಾಮಗಿರಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಸ್ಲಿಂ ಮಹಿಳೆಯರು ತಮ್ಮ ಮಕ್ಕಳಿಗೆ ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಟಿಪ್ಪು ಸುಲ್ತಾನ್, ಭಗತ್ ಸಿಂಗ್ ಕತೆಗಳನ್ನು ಹೇಳಿಕೊಡುತ್ತಿದ್ದು, ಎನ್ಐಎ ದಾಳಿ ಮಾಡಿದರೆ ನಮ್ಮ ಮಕ್ಕಳು ಹೆದರಲ್ಲ, ಇಲ್ಲಿನ ಮಹಿಳೆಯರು ಸುಮ್ಮನಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುರತ್ಕಲ್ ನಲ್ಲಿ ಕೊಲೆಯಾದ ಫಾಝಿಲ್ ತಂದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಗಳಲ್ಲಿ ಸರ್ಕಾರ ತಾರತಮ್ಯ ಮಾಡಿದೆ ಎಂದ ಅವರು, ನನ್ನ ಮಗನನ್ನು ಕೊಲೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕಣ್ಣೀರಿನ ಮೂಲಕ ಆಗ್ರಹಿಸಿದರು.

ಯುಎಪಿಎ ಕಾಯ್ದೆ ವಿರೋಧಿ ಹೋರಾಟ ಸಮಿತಿಯವರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಜಿಲ್ಲೆಯ ಸಂಘ ಸಂಸ್ಥೆಗಳ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.



Join Whatsapp