ಪೌಷ್ಟಿಕಾಂಶ ಯೋಜನೆಯ ಭಾರಿ ಹಗರಣದಲ್ಲಿ ಮಧ್ಯಪ್ರದೇಶ ಸರ್ಕಾರ ಭಾಗಿ : ಆಮ್ ಆದ್ಮಿ ಆರೋಪ

Prasthutha|

ನವದೆಹಲಿ: ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಪೌಷ್ಟಿಕಾಂಶ ಯೋಜನೆ ಜಾರಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಭಾರಿ ಹಗರಣ ನಡೆಸಿದೆ ಎಂದು ಆಮ್ ಆದ್ಮಿ ಆರೋಪಿಸಿದ್ದು, ಈ ಸಂಬಂಧ ಸಿಬಿಐಗೆ ದೂರು ನೀಡುವುದಾಗಿ ತಿಳಿಸಿದೆ.

- Advertisement -

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್, ಅಕೌಂಟೆಂಟ್ ಜನರಲ್ ಅವರ ಆಡಿಟ್ ವರದಿಯನ್ನು ಉಲ್ಲೇಖಿಸಿದ್ದಾರೆ. ಯೋಜನೆಯನ್ನು ಜಾರಿಗೊಳಿಸಿದ ರಾಜ್ಯ ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಯು ಸರ್ಕಾರದ ಅಧೀನದಲ್ಲಿರುವುದರಿಂದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇದು ಕೋಟಿಗಟ್ಟಲೆ ಮೊತ್ತದ ಬೃಹತ್ ಹಗರಣವಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ನಾವು ಸಿಬಿಐಗೆ ದೂರು ನೀಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

- Advertisement -

ಆರು ತಿಂಗಳ ಮಗುವಿನಿಂದ ಹಿಡಿದು ಮೂರು ವರ್ಷದ ಮಕ್ಕಳಿಗೆ ಮತ್ತು ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳು, ತಾಯಂದಿರಿಗೆ ಬಲವರ್ಧಿಸುವ ಆಹಾರ ಒದಗಿಸುವ ರಾಜ್ಯ ಸರ್ಕಾರದ ಈ ಯೋಜನೆ ಜಾರಿಗೆ ಸುಮಾರು 2500 ಕೋಟಿ ರೂ.ಗಳ ವೆಚ್ಚವನ್ನು ಅಂದಾಜಿಸಲಾಗಿದೆ. ಇದರಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎಂದು ಭಾರದ್ವಾಜ್ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಮೋದಿ ಅವರು ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯದಿಂದ ಈ ಹಗರಣವನ್ನು ತನಿಖೆಗೊಳಪಡಿಸಬೇಕೆಂದು ಭಾರದ್ವಾಜ್ ಅವರು ಆಗ್ರಹಿಸಿದ್ದಾರೆ.



Join Whatsapp