ಮೈಸೂರು: ಹಿಂದೂ ಧರ್ಮದ ಯುವತಿ ಅಪೂರ್ವ ಶೆಟ್ಟಿ ಎಂಬಾಕೆಯನ್ನು ಮೈಸೂರಿನ ಹುಣಸೂರು ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಆಶಿಕ್ ಎಂಬ ಮುಸ್ಲಿಮ್ ಯುವಕ ಹತ್ಯೆ ನಡೆಸಿದ್ದಾನೆ ಎಂದು ಸೆಪ್ಟೆಂಬರ್ 2ರಂದು ನಗರದ ಸಂಜೆ ಪತ್ರಿಕೆ ಸ್ಟಾರ್ ಆಫ್ ಮೈಸೂರು ವರದಿ ಮಾಡಿತ್ತು. ಆದರೆ ಆ ಯುವಕನ ಹೆಸರು ಆಶಿಕ್ ಅಲ್ಲ. ಆತ ಹಿಂದೂ ಧರ್ಮಕ್ಕೆ ಸೇರಿದ ಆಶಿಶ್ ಎಂಬ ಯುವಕ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಬಹಿರಂಗಪಡಿಸಿದೆ.
ಸಂತ್ರಸ್ತೆ ವಿದ್ಯಾರ್ಥಿನಿ ಅಪೂರ್ವ ಶೆಟ್ಟಿ ಎಂಬಾಕೆ ತನ್ನ ಗೆಳೆಯನೆಂದು ನಂಬಲಾದ ವ್ಯಕ್ತಿಯೊಂದಿಗೆ ಹೋಟೆಲ್’ನಲ್ಲಿ ಉಳಿದುಕೊಂಡಿದ್ದಳು. ಈತನೇ ಸಂತ್ರಸ್ತೆ ಅಪೂರ್ವ ಶೆಟ್ಟಿಯನ್ನು ಹೋಟೆಲ್ ಕೊಠಡಿಯಲ್ಲಿ ಹತ್ಯೆ ನಡೆಸಿದ ಬಳಿಕ ಅಲ್ಲಿಂದ ಪರಾರಿಯಾಗಿದ್ದನು.
ಈ ಪ್ರಕರಣದ ವರದಿಯಲ್ಲಿ ಹಲವು ಪತ್ರಿಕೆಗಳು ಯುವಕನ ಹೆಸರನ್ನು ತಿರುಚಿ, ಹಿನಕಲ್ ಗ್ರಾಮದ ಆಶಿಕ್ ಎಂಬಾತನೇ ಈ ಪ್ರಕರಣದ ಆರೋಪಿ ಎಂದು ವರದಿ ಮಾಡಿತ್ತು. ಈ ಕುರಿತು ಸುದರ್ಶನ್ ನ್ಯೂಸ್’ನ ವರದಿಗಾರ ಸಾಗರ್ ಕುಮಾರ್ ಎಂಬಾತ ಸಂತ್ರಸ್ತೆ ಮತ್ತು ಆರೋಪಿಯ ಕಾಲೇಜಿನ ಫೋಟೋವೊಂದನ್ನು ಹಂಚಿಕೊಂಡು ‘ನನ್ನ ಅಬ್ದುಲ್ ಇತರರಂತೆ ಅಲ್ಲ’ ಎಂಬ ಶೀರ್ಷಿಕೆ ಅಡಿಯಲ್ಲಿ ಟ್ವೀಟ್ ಮಾಡಿದ್ದನು.
ಈ ಪ್ರಕರಣ ಅರೋಪಿ ಆಶಿಶ್ ಎಂಬ ಹೆಸರು ಮುಸ್ಲಿಮ್ ನಾಮಧೇಯದೊಂದಿಗೆ ಸಾಮ್ಯವಿರುವುದರಿಂದ ಇದೊಂದು ಅಂತರ್ಧರ್ಮೀಯ ಸಂಬಂಧ ಎಂದು ಟ್ವೀಟ್ ನಲ್ಲಿ ಬಿಂಬಿಸಲಾಗುತ್ತಿದೆ. ಹಿಂದೂ ಯುವತಿಯರು, ಮುಸ್ಲಿಮ್ ಯುವಕರ ಲವ್ ಜಿಹಾದ್ ಬಲೆಗೆ ಬೀಳುತ್ತಿದ್ದಾರೆ. ಮುಸ್ಲಿಮ್ ಯುವಕರು, ಹಿಂದೂ ಯುವತಿಯರನ್ನು ಲವ್ ಜಿಹಾದ್ ಮೂಲಕ ಮತಾಂತರಗೊಳಿಸಲು ತರಬೇತಿ ಪಡೆಯುತ್ತಾರೆ ಎಂಬ ಸಂಘ ಪ್ರೇರಿತ ಧ್ವನಿಯನ್ನು ಪ್ರತಿಪಾದಿಸುತ್ತಿದೆ.
ಈ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ , ಅಪೂರ್ವ ಶೆಟ್ಟಿಯನ್ನು ಕೊಲೆ ಮಾಡಿದ ಆಶಿಶ್ ಎಂಬಾತ ಹಿಂದೂ ಧರ್ಮಕ್ಕೆ ಸೇರಿದವನು ಎಂದು ಗೊತ್ತಿಲ್ಲದೆ ಹಲವರು ಈ ಕೊಲೆಗೆ ಲವ್ ಜಿಹಾದ್ ಬಣ್ಣ ಹಚ್ಚುತ್ತಿದ್ದಾರೆ. ಟ್ವಿಟ್ಟರ್ ಬಳಕೆದಾರ ರಿತುರಾಥೋಡ್ ಎಂಬಾಕೆ ಇದೇ ರೀತಿ ಟ್ವೀಟ್ ಮಾಡಿದ್ದು, ಒಳ್ಳೆಯ ವಿದ್ಯಾವಂತೆ, ಸುಂದರಿಯಾದ ಹಿಂದೂ ಯುವತಿಯರು ಕೊಳಕು ನಿರುದ್ಯೋಗಿ ಮುಸ್ಲಿಮ್ ಹುಡುಗರ ಖೆಡ್ಡಾಕ್ಕೆ ಬೀಳುತ್ತಾರೆ ಎಂಬ ಶೀರ್ಷಿಕೆಯಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಈ ಘಟನೆಯನ್ನು ಝೀ ನ್ಯೂಸ್, ಟೈಮ್ಸ್ ಆಫ್ ಇಂಡಿಯಾ ಮಲಯಾಳಂ, ನ್ಯೂಸ್ 18 ಕನ್ನಡ, ಟಿವಿ ಕನ್ನಡ ಮತ್ತು ಮಾತೃಭೂಮಿ ಕೂಡ ವರದಿ ಮಾಡಿದೆ. ನ್ಯೂಸ್ 18 ಕನ್ನಡ ಮತ್ತು ಟಿವಿ 9 ಚಾನೆಲ್’ಗಳನ್ನು ಹೊರತುಪಡಿಸಿ, ಇನ್ನುಳಿದ ಅನೇಕ ಪತ್ರಿಕೆಗಳು ಆರೋಪಿಯನ್ನು ಆಶಿಕ್ ಎಂದು ಹೆಸರಿಸಿದ್ದು ವರದಿಯಲ್ಲಿ ಮುಸ್ಲಿಂ ಎಂದು ಬಿಂಬಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ಟ್ ನ್ಯೂಸ್ fact check ತಂಡವು ಮೈಸೂರು ಡಿಸಿಪಿ ಪ್ರದೀಪ್ ಗುಂಟಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಈ ಪ್ರಕರಣ ಕೋಮುಬಣ್ಣವನ್ನು ಪಡೆದುಕೊಂಡಿಲ್ಲ ಎಂದು ಡಿಸಿಪಿ ಅವರು ಆಲ್ಟ್ ತಂಡಕ್ಕೆ ಮಾಹಿತಿ ನೀಡಿದ್ದಾರೆ.
ಅಲ್ಲದೆ ದೇವರಾಜ ಪೊಲೀಸ್ ಠಾಣೆಗೆ ಆಲ್ಟ್ ತಂಡ ಖುದ್ದು ಭೇಟಿ ಮಾಡಿದ್ದು, ಆರೋಪಿಯ ಹೆಸರು ಆಶಿಕ್ ಅಲ್ಲ, ಬದಲಾಗಿ ಆಶಿಶ್ ಎಂದು ಹಿರಿಯ ಅಧಿಕಾರಿಯೊಬ್ಬರು ಆಲ್ಟ್ ತಂಡಕ್ಕೆ ತಿಳಿಸಿದ್ದಾರೆ. ಸಂತ್ರಸ್ತೆ ಅಪೂರ್ಣ ಶೆಟ್ಟಿ ಮತ್ತು ಆರೋಪಿ ಆಶಿಶ್ ಇಬ್ಬರೂ ಕೂಡ ಹಿಂದೂ ಸಮುದಾಯಕ್ಕೆ ಸೇರಿದವರೆಂದು ಖಚಿತಪಡಿಸಿದ್ದಾರೆ.
ಪ್ರಕರಣದ ಎಫ್.ಐ.ಆರ್ ಪ್ರತಿಯಲ್ಲೂ ಕೂಡ ಆರೋಪಿ ಹೆಸರು ಆಶಿಶ್ ಎಂದು ಸ್ಪಷ್ಟವಾಗಿ ದಾಖಲಾಗಿದೆ ಮತ್ತು ಆರೋಪಿ ಆಶಿಶ್ ಎಂಬಾತನ ಹೆಸರಿನಲ್ಲಿ ಆಗಸ್ಟ್ 29ರಂದು ಹೋಟೆಲ್ ಅನ್ನು ಬುಕ್ ಮಾಡಿರುವುದು ಎಫ್.ಐ.ಆರ್’ನಲ್ಲಿ ಉಲ್ಲೇಖಿಸಲಾಗಿದೆ. ಆಗಸ್ಟ್ 30ರಂದು ಸಂತ್ರಸ್ತ ಯುವತಿ ಕೊನೆಯದಾಗಿ ಕುಟುಂಬದೊಂದಿಗೆ ಮಾತನಾಡಿದ್ದಾಳೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 1ರ ನಡುವೆ ಆಕೆಯ ಮೃತದೇಹ ಪತ್ತೆಯಾಗಿದೆ. ಆದರೆ ಎಫ್.ಐ.ಆರ್ ನಲ್ಲಿ ಎಲ್ಲಿಯೂ ಕೂಡ ಕೋಮುಬಣ್ಣದ ಕುರಿತು ತನಿಖಾ ತಂಡ ಉಲ್ಲೇಖಿಸಿಲ್ಲ.
ಸಂತ್ರಸ್ತೆಯ ತಂದೆ ರವೀಶ್ ಕುಮಾರು ಹೆಚ್. ಟಿ , ಮಗಳ ಕೊಲೆ ಕುರಿತು ಮಾತನಾಡಿದ್ದು, ಆರೋಪಿ ಆಶಿಶ್ ಹಿಂದೂ ಧರ್ಮಕ್ಕೆ ಸೇರಿದ್ದಾನೆ ಎಂದು ದೃಢಪಡಿಸಿದ್ದಾರೆ.
ಒಟ್ಟಾರೆಯಾಗಿ ಮೈಸೂರಿನಲ್ಲಿ ನಡೆದ ಹಿಂದೂ ಸಮುದಾಯದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಕೊಲೆ ಆರೋಪಿಯ ಹೆಸರನ್ನು ಆಶಿಕ್ ಎಂದು ತಪ್ಪಾಗಿ ವರದಿ ಮಾಡಿದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೋಮುಬಣ್ಣ ನೀಡಿದವರಿಗೆ ತಿರುಗುಬಾಣವಾಗಿದೆ. ಪೊಲೀಸರು ಈ ಪ್ರಕರಣಕ್ಕೆ ಕೋಮು ದೃಷ್ಟಿಕೋನವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಆರೋಪಿ ಹಿಂದೂ ಧರ್ಮಕ್ಕೆ ಸೇರಿದ ಆಶಿಶ್ ಎಂಬುದು ಬಹಿರಂಗವಾಗಿದೆ.
ಸದಾ ಕೋಮು ಅಧಾರದಲ್ಲಿ ವರದಿಯನ್ನು ಪ್ರಕಟಿಸುವ ಸುದರ್ಶನ್ ನ್ಯೂಸ್ ಮತ್ತು ಅದರ ವರದಿಗಾರರ ಅಸಲಿಯತ್ತು ಜನರ ಮುಂದೆ ಬಟಾಬಯಲಾಗಿದ್ದು, ಆಲ್ಟ್ ನ್ಯೂಸ್ ವಾಸ್ತವಾಂಶವನ್ನು ದಾಖಲೆ ಸಹಿತ ಜನತೆಯ ಮುಂದಿರಿಸಿದ್ದು ಶ್ಲಾಘನೀಯವಾಗಿದೆ.