ಬೆಂಗಳೂರು: ಬಂಧಿಸಲು ಬಂದ ಕೇರಳದ ಸಬ್ ಇನ್ಸ್ಪೆಕ್ಟರ್ ಗೆ ರಿವಾಲ್ವರ್ ತೋರಿಸಿ ಬೆದರಿಸಿ ಕಾರಿನಲ್ಲಿ ಪರಾರಿಯಾಗಿದ್ದ ಕುಖ್ಯಾತ ಡ್ರಗ್ ಪೆಡ್ಲರ್ ನನ್ನು ಹೆಚ್ ಎಸ್ ಆರ್ ಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳದ ಮಾದಕವಸ್ತು ಮಾರಾಟ ದಂಧೆಯಲ್ಲಿ ಕುಖ್ಯಾತಿ ಪಡೆದಿದ್ದ ಡ್ರಗ್ಸ್ ಪೆಡ್ಲರ್ ಜಾಫರ್ ಬಂಧಿತ ಆರೋಪಿಯಾಗಿದ್ದಾನೆ.
ಬೆಂಗಳೂರಿಗೂ ದಂಧೆ ವಿಸ್ತರಿಸಿದ್ದ ಆರೋಪಿ ಜಾಫರ್ ಕೇರಳ ಕ್ಯಾಲಿಕಟ್ ಪೊಲೀಸರಿಗೆ ಡ್ರಗ್ಸ್ ಕೇಸಲ್ಲಿ ಬೇಕಾಗಿದ್ದು, ಆತನನ್ನು ಬಂಧಿಸಲು ಬೆನ್ನತ್ತಿ ಕೇರಳದ ಸಬ್ ಇನ್ಸ್ಪೆಕ್ಟರ್ ನೇತೃತ್ವದ ತಂಡ ಬಂದಿತ್ತು. ಜಾಫರ್ ಎಚ್ ಎಸ್ ಆರ್ ಲೇಔಟ್ನಲ್ಲಿರುವ ಆಲ್ ಬೇಕ್ ಹೋಟೆಲ್ಗೆ ಊಟಕ್ಕೆ ಬರುವ ಖಚಿತವಾದ ಮಾಹಿತಿಯನ್ನು ಆಧರಿಸಿ ಅಲ್ಲಿಗೆ ಹೋದಾಗ ಜಾಫರ್ ಪಿಎಸ್ಐಗೆ ರಿವಾಲ್ವರ್ ತೋರಿಸಿ ಬೆದರಿಸಿ ಉಳಿದವರೂ ಹತ್ತಿರ ಬರದಂತೆ ನೋಡಿಕೊಂಡು ಕ್ಷಣಾರ್ಧದಲ್ಲಿ ಕಾರಿನಲ್ಲಿ ಪರಾರಿಯಾಗಿದ್ದಾನೆ.
ಕೂಡಲೇ ಪಿಎಸ್ಐ ಎಚ್ ಎಸ್ ಆರ್ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿ ನೆರವು ಕೋರಿದ್ದು,ಕೇರಳದ ಪೊಲೀಸ್ಗೆ ಮಾಡಿದ ಅಪಮಾನ, ಹಾಕಿದ ಬೆದರಿಕೆ ಎಂದೇ ಪರಿಭಾವಿಸಿಕೊಂಡ ಪೊಲೀಸರು ಡ್ರಗ್ ಪೆಡ್ಲರ್ನನ್ನು ಕೆಲವೇ ದಿನದಲ್ಲಿ ಹೆಡೆಮುರಿಗೆ ಕಟ್ಟಿ ಇದು ಕರ್ನಾಟಕ ಪೊಲೀಸ್ ಎಂದು ತೋರಿಸಿಕೊಟ್ಟಿದ್ದಾರೆ.
ಬಂಧಿತ ನನ್ನು ಕೇರಳದ ಕ್ಯಾಲಿಕಟ್ ಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಡ್ರಗ್ ಪೆಡ್ಲರ್ ಜಾಫರ್ ಗೆ ರಿವಾಲ್ವರ್ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.