ರಿಯಾದ್: ಸೌದಿ ಅರೇಬಿಯಾದ ರಿಯಾದ್ ನಗರದ ನಜದ್ ವಿಲೇಜ್ ಎಂಬ ಕಂಪೆನಿಯಲ್ಲಿ ಹಲವಾರು ವರ್ಷಗಳಿಂದ ಮೆನೇಜರ್ ವೃತ್ತಿ ನಿರ್ವಹಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ಹರೀಶ್ ಪೈ ಗೋಕುಲ್ ದಾಸ್ ಎಂಬವರು ದಿನಾಂಕ 27-08-2022 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಮೃತದೇಹವನ್ನು ಭಾರತಕ್ಕೆ ಕರೆತರಲು ಜನ ಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳನ್ನು ಸಂಪರ್ಕಿಸಿಯೂ ಯಾವುದೇ ಧನಾತ್ಮಕ ಪ್ರತಿಕ್ರಿಯೆ ಕಾಣದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಇಂಡಿಯನ್ ಸೋಶಿಯಲ್ ಫೋರಂ ಕಾರ್ಯಕರ್ತರನ್ನು ಸಂಪರ್ಕಿಸಿದರು. ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾದ ನೌಶಾದ್ ಕಡಬ, ನಿಝಾಮ್ ಬಜ್ಪೆ, ಅಶ್ಫಾಕ್ ಉಚ್ಚಿಲ ಹಾಗೂ ಇಜಾಝ್ ಫರಂಗಿಪೇಟೆ ನೇತೃತ್ವದ ತಂಡವು ಕೊನೆಗೂ ಸೌದಿ ಅರೇಬಿಯಾದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪಾರ್ಥಿವ ಶರೀರವನ್ನು ಊರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಮೃತರ ಸಂಬಂಧಿಕರು ಯಾರೂ ಸ್ಥಳೀಯವಾಗಿ ಲಭ್ಯರಿಲ್ಲದ ಕಾರಣ ಸ್ವತಃ ಇಂಡಿಯನ್ ಸೋಶಿಯಲ್ ಫೋರಂನ ಸದಸ್ಯರಾದ ನೌಶಾದ್ ಕಡಬರವರ ಹೆಸರಿನಲ್ಲಿ ಅಧಿಕಾರ ಪತ್ರವನ್ನು (ಪವರ್ ಆಫ್ ಅಟಾರ್ನಿ) ಪಡೆಯಲಾಯಿತು. ನಿಝಾಮ್ ಬಜ್ಪೆ ನೇತೃತ್ವದ ತಂಡವು ಹಲವಾರು ಬಾರಿ ಆಸ್ಪತ್ರೆ, ಶವಾಗಾರ ಮತ್ತು ಪೊಲೀಸ್ ಠಾಣೆಯನ್ನು ಭೇಟಿ ಮಾಡಿ ಭಾರತೀಯ ರಾಯಭಾರಿ ಕಚೇರಿಯ ಸಹಕಾರದಿಂದ ಅಂತಿಮವಾಗಿ ಎಲ್ಲ ದಾಖಲೆ ಪತ್ರ ಪಡೆದು ಕಾರ್ಗೋ ಮೂಲಕ ಹರೀಶ್ ಪೈ ಗೋಕುಲ್ ದಾಸ್ ರ ಮೃತ ದೇಹವನ್ನು ದಿನಾಂಕ 08-09-2022 ರಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಮೃತರು ಕೆಲಸ ಮಾಡುತ್ತಿದ್ದ ಸಂಸ್ಥೆಯು ನೀಡಬೇಕಾಗಿದ್ದ ಒಟ್ಟು ಮೊತ್ತವನ್ನು ಫೋರಂನ ಸದಸ್ಯರು ಕಂಪೆನಿಯ ಉನ್ನತ ಅಧಿಕಾರಿಗಳೊಂದಿಗೆ ನಿರಂತರ ಮಾತುಕತೆ ನಡೆಸಿದ ಪರಿಣಾಮ ರಾಯಭಾರಿ ಕಚೇರಿ ಮೂಲಕ ವರ್ಗಾಯಿಸಲಾಯಿತು. ಅದೇ ರೀತಿ ಮೃತದೇಹವನ್ನು ವಿಮಾನದ ಮೂಲಕ ಸ್ವಗ್ರಾಮಕ್ಕೆ ಕಳುಹಿಸಲು ತಗುಲಿದ ವೆಚ್ಚವನ್ನು ಕಂಪೆನಿ ಮೂಲಕವೇ ಭರಿಸಲಾಯಿತು.
ಮೃತರ ಅಕಾಲಿಕ ಮರಣಕ್ಕೆ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯು ಸಂತಾಪ ಸೂಚಿಸಿದೆ. ಅನಿವಾಸಿ ಭಾರತೀಯರ ಸಂಕಷ್ಟಗಳಿಗೆ ಸ್ಪಂದಿಸಲು ಸದಾ ಮುಂಚೂಣಿಯಲ್ಲಿರುವ ಇಂಡಿಯನ್ ಸೋಶಿಯಲ್ ಫೋರಂ ಕಾರ್ಯಕರ್ತರು ಧರ್ಮಾತೀತವಾಗಿ ಹಲವಾರು ಭಾರತೀಯರ ಮೃತದೇಹಗಳನ್ನು ತವರಿಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.
ಮೃತದೇಹ ಕುಟುಂಬಕ್ಕೆ ಹಸ್ತಾಂತರಿಸಿದ ಎಸ್ ಡಿಪಿಐ
ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಕಡಬ ನಿವಾಸಿ ಗೋಕುಲ್ ದಾಸ್ ಹರೀಶ್ ಪೈ ಯವರ ಪಾರ್ಥೀವ ಶರೀರವು ಮಂಗಳೂರು ವಿಮಾನ ನಿಲ್ದಾಣ ತಲುಪಿದೆ . ಹರೀಶ್ ರವರ ಕುಟುಂಬ ಸದಸ್ಯರು ಮತ್ತು SDPI ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲಾ ಜೋಕಟ್ಟೆ, ಮೂಡಬಿದ್ರೆ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಆಸಿಫ್ ಕೋಟೆಬಾಗಿಲು ಹಾಗೂ ಸ್ಥಳೀಯ ಮಖಂಡರಾದ ನಿಸಾರ್ ಮರವೂರು ,ಇಸ್ಮಾಯಿಲ್ ಇಂಜಿನಿಯರ್, ಇಮ್ರಾನ್ ಬಜಪೆ ಮೊದಲಾದವರು ಮೃತದೇಹವನ್ನು ಸ್ವೀಕರಿಸಿದರು. ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಇಂದು ಅಪರಾಹ್ನ 3 ಗಂಟೆಗೆ ಕಡಬದ ಅವರ ಸ್ವಗೃಹದಲ್ಲಿ ಅಂತಿಮ ದರ್ಶನ ನಡೆದಿದೆ ಎಂದು ಮೂಲಗಳು ತಿಳಿಸಿವೆ.