►ಹೆಚ್ ಎಲ್ ಸಿ ಆಯುರ್ ಧಾಮದಲ್ಲಿ ಆಯುಷ್ ಕ್ಷೇಮ ವೈದ್ಯ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ
ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಅಭಿಯಾನದಡಿ ರಾಜ್ಯದಲ್ಲಿರುವ 160 ಆರೋಗ್ಯ ಮತ್ತು ಆಯುಷ್ ಕ್ಷೇಮ ಕೇಂದ್ರಗಳ ವೈದ್ಯಕೀಯ ಸಿಬ್ಬಂದಿಗಳಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಬೆಂಗಳೂರಿನ ಹೊರವಲಯದ ಹೆಚ್ ಎಲ್ ಸಿ ಪ್ರಕೃತಿ ಆಯುರ್ಧಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಸರ್ಕಾರದ ಆಯುಷ್ಮಾನ್ ಇಲಾಖೆಯ ಆಯುಕ್ತರಾದ ರಾಮಚಂದ್ರ,ಅಭಿಯಾನದಡಿಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಧಾನ ಮಂತ್ರಿಗಳ ಆಯುಷ್ಮಾನ್ ಅಭಿಯಾನದಡಿ ಸ್ಥಾಪಿಸಲಾಗಿರುವ 160 ಆರೋಗ್ಯ ಹಾಗೂ ಆಯುಷ್ ಕ್ಷೇಮ ಕೇಂದ್ರಗಳ ವೈದ್ಯ ಅಧಿಕಾರಿಗಳು, ಸಿಬ್ಬಂದಿಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಮೂರು ದಿನಗಳ ಕಾಲ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳ ಕ್ಷೇಮ ಕೇಂದ್ರಗಳ ಸಿಬ್ಬಂದಿಗಳಿಗೆ ಮೊದಲ ಹಂತವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎರಡನೇ ಹಂತವಾಗಿ ಬೆಳಗಾವಿಯಲ್ಲಿ ಉತ್ತರ ಭಾಗದ ಜನರಿಗೆ ಈ ತರಬೇತಿ ಕಾರ್ಯಾಗಾರ ನಡೆಸಲಾಗುವುದು. ಮುಂಬರಲಿರುವ ದಿನಗಳಲ್ಲಿ ರಾಜ್ಯದಲ್ಲಿ 270 ಆಯುಷ್ ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು.
ಆಯುಷ್ ಇಲಾಖೆಯ ಬೆಂಗಳೂರು ನಗರ ಜಲ್ಲಾ ಹಾಗೂ ಗ್ರಾಮಾಂತರ ಅಧಿಕಾರಿ ಮಹಮದ್ ರಫೀಕ್ ಹಕೀಂ ಮಾತನಾಡಿ, ಪ್ರಧಾನ ಮಂತ್ರಿಗಳ ಆಶಯದಂತೆ ದೇಶದಲ್ಲಿ 12500 ಕ್ಷೇಮ ಕೇಂದ್ರಗಳನ್ನು ತೆರೆಯಲಾಗಿದೆ. ಅದರಂತೆ ರಾಜ್ಯದಲ್ಲಿ 160 ಕ್ಷೇಮ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರಥಮ ಹಂತವಾಗಿ ಮೈಸೂರು, ಬೆಂಗಳೂರು, ಚಿತ್ರದುರ್ಗ, ದಾವಣಗೆರೆ ಭಾಗದ ಕ್ಷೇಮ ಕೇಂದ್ರಗಳ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಹೆಚ್ ಎಲ್ ಸಿ ಆಯುರ್ವೇದ ನೇಚರ್ ಕ್ಯೂರ್ ಆಸ್ಪತ್ರೆಯ ಮುಖ್ಯಸ್ಥ ಡಾ.ಡಿ.ಹೈದರ್ ವಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ಮಾನ್ ಭಾರತ್ ಅಭಿಯಾನದಡಿ ಉತ್ತಮ ಕಾರ್ಯಕ್ರಮವನ್ನು ಜಾರಿ ತಂದಿದ್ದಾರೆ. ಸಾರ್ವಜನಿಕರು ಹೆಚ್ಚು ಆಯುರ್ವೇದ ಚಿಕಿತ್ಸೆಯನ್ನು ಪಡೆದು ಉತ್ತಮ ಆರೋಗ್ಯವಂತ ಸಮಾಜ ಸೃಷ್ಟಿ ಗೆ ಕಾರಣಕರ್ತರಾಗಬೇಕೆಂದು ತಿಳಿಸಿದರು.
ಡಾ. ಎಂ.ಎ. ದಾಸರ್ ಉಪನಿರ್ದೇಕರು ಆಯುಷ್ ಇಲಾಖೆ,ಡಾ.ಪಿ.ಎಂ. ಸತ್ಯಮೂರ್ತಿ ಹೆಬ್ಬಾರ್ಉಪ ನಿರ್ದೇಶಕರು, ಆಯುಷ್ ತರಬೇತಿ ಕೇಂದ್ರ ಸುಗ್ಗನಹಳ್ಳಿ ರಾಮನಗರ ಜಿಲ್ಲೆ ಸೇರಿದಂತೆ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಆಯುಷ್ ಆರೋಗ್ಯ ಹಾಗೂ ಕ್ಷೇಮ ಕೇಂದ್ರಗಳ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು