ನವದೆಹಲಿ: UAPA ಕಾಯ್ದೆ ಅಡಿಯಲ್ಲಿ ಬಂಧಿತರಾಗಿರುವ ಹೋರಾಟಗಾರ, ವಿದ್ಯಾರ್ಥಿ ಮುಖಂಡ ಅತಿಕ್ ರಹ್ಮಾನ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು, ತಕ್ಷಣ ಜೈಲಿನಿಂದ ಬಿಡುಗಡೆಗೊಳಿಸಬೇಕೆಂದು ಅಮ್ನೆಸ್ಟಿ ಇಂಡಿಯಾ ಇಂಟರ್’ನ್ಯಾಷನಲ್ ಆಗ್ರಹಿಸಿದೆ.
ಅತಿಕ್ ರಹ್ಮಾನ್ ಅವರನ್ನು ಸುಳ್ಳು ಆರೋಪದ ಮೇಲೆ ಸುಮಾರು ಎರಡು ವರ್ಷಗಳ ಕಾಲ ಬಂಧನದಲ್ಲಿರಿಸುವುದು ಭಾರತೀಯ ಅಧಿಕಾರಿಗಳ ಒಂದು ಹಾಸ್ಯಾಸ್ಪದ ನಡೆಯಾಗಿದೆ. ಈ ನಡುವೆ ವಿವಿಧ ಕಾರಣಗಳನ್ನು ನೀಡಿ ಅವರ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುವುದು ಮತ್ತು ವಿಳಂಬ ಮಾಡುವುದು ಸೇರಿದಂತೆ ಅವರ ಜೀವನವನ್ನು ಹಾಳುಗೆಡವುದು ಅಧಿಕಾರಿಗಳ ಪ್ರತೀಕಾರವನ್ನು ಬಹಿರಂಗಪಡಿಸುತ್ತದೆ ಎಂದು ಅಮ್ನೆಸ್ಟಿ ಇಂಡಿಯಾ ಇಂಟರ್’ನ್ಯಾಷನಲ್ ಮಂಡಳಿಯ ಅಧ್ಯಕ್ಷ ಆಕಾರ್ ಪಟೇಲ್ ತಿಳಿಸಿದ್ದಾರೆ.
UAPA ಕಾಯ್ದೆ ಅಡಿಯಲ್ಲಿ ಬಂಧಿತರಾಗಿರುವ ರಹ್ಮಾನ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಅವರ ಮೇಲಿನ ಎಲ್ಲಾ ರಾಜಕೀಯ ಪ್ರೇರಿತವಾಗಿ ದಾಖಲಾಗಿರುವ ಪ್ರಕರಣವನ್ನು ಕೈಬಿಡಬೇಕು ಎಂದು ಪಟೇಲ್ ಆಗ್ರಹಿಸಿದ್ದಾರೆ. ರಹ್ಮಾನ್ ಅವರೊಂದಿಗೆ ಅಮಾನವೀಯ ರೀತಿಯಲ್ಲಿ ವರ್ತಿಸುವುದು ಮತ್ತು ವೈದ್ಯಕೀಯ ಚಿಕಿತ್ಸೆ ನೀಡದಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಹತ್ರಾಸ್’ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವರದಿ ಮಾಡಲು ಮತ್ತು ಸಂತ್ರಸ್ತರನ್ನು ಭೇಟಿ ಮಾಡಲು ತೆರಳಿದ್ದ ಅತಿಕ್ ರಹ್ಮಾನ್, ಪತ್ರಕರ್ತ ಸಿದ್ದೀಕ್ ಕಾಪ್ಪನ್, ಜಾಮಿಯಾ ಮಿಲಿಯ ಇಸ್ಲಾಮಿಯಾ ವಿದ್ಯಾರ್ಥಿ ಮಸೂದ್ ಅಹ್ಮದ್ ಮತ್ತು ಟ್ಯಾಕ್ಸಿ ಚಾಲಕ ಮುಹಮ್ಮದ್ ಆಲಂ ಅವರನ್ನು ಅಕ್ಟೋಬರ್ 5, 2020ರಲ್ಲಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.