ಗುರುಗಳ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಗುರುಗಳ ಅನುಯಾಯಿಗಳು ಸಹಿಸಲ್ಲ
ಮಂಗಳೂರು: ಮಂಗಳೂರಿನಲ್ಲಿ ರಾಜ್ಯಮಟ್ಟದ ಗುರುಜಯಂತಿ ಆಚರಣೆ ನಡೆಸಲು ತೀರ್ಮಾನಿಸಿರುವುದು ಮತ್ತೊಮ್ಮೆ ನಾರಾಯಣಗುರುಗಳ ಹೆಸರಲ್ಲಿ ಗೊಂದಲ ಸೃಷ್ಟಿಸಲು ಮಾಡಿರುವ ಷಡ್ಯಂತ್ರವೇ? ಅಥವಾ ಅಸಮಾಧಾನದಲ್ಲಿರುವ ಬಿಲ್ಲವ ಸಮುದಾಯದ ಕಣ್ಣೊರೆಸುವ ತಂತ್ರವೇ? ಎಂದು ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಕೋಶಾಧಿಕಾರಿ ಪದ್ಮರಾಜ್ ಆರ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ತತ್ವವನ್ನು ಜಗತ್ತಿಗೆ ಸಾರಿ ಎಲ್ಲರ ನೆಚ್ಚಿನ ಗುರುವಾದವರು ಬ್ರಹ್ಮಶ್ರೀ ನಾರಾಯಣಗುರುಗಳು. ಅಸಮಾನತೆಯನ್ನು ಮೆಟ್ಟಿ ನಿಂತು, ಸಮಾಜದ ಕೆಳವರ್ಗದವರಿಗೂ ದೇವಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ನಾರಾಯಣ ಗುರುಗಳ ಅನುಯಾಯಿಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯೆಯಲ್ಲಿದ್ದು, ಕರಾವಳಿಯೆಲ್ಲೆಡೆ ಬ್ರಹ್ಮಶ್ರೀ ನಾರಾಯಣಗುರು ಮಂದಿರ, ಸಂಘಗಳು ನಿರ್ಮಾಣಗೊಂಡು ಗುರುಗಳನ್ನು ದೇವರಂತೆ ಪೂಜೆ ಮಾಡಿಕೊಂಡು ಬರಲಾಗಿದೆ.
ಹಾಗೆಯೇ ಅವರ ಜನ್ಮದಿನವನ್ನು ಅತ್ಯಂತ ಭಕ್ತಿ, ಶ್ರದ್ಧಾಪೂರ್ವಕವಾಗಿ ಎಲ್ಲ ಸಂಘಗಳಲ್ಲೂ ಬೆಳಿಗ್ಗೆಯಿಂದ ಸಂಜೆಯವರೆಗೆ ಭಜನೆ, ಪೂಜೆ, ಅನ್ನ ಸಂತರ್ಪಣೆ, ಮೆರವಣಿಗೆ, ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಣೆ ನಡೆಸಲಾಗುತ್ತಿದೆ. ಎಲ್ಲ ಕಡೆಯೂ ಆಮಂತ್ರಣ ಪತ್ರಿಕೆಗಳ ಹಂಚಿಕೆಯೂ ಮುಗಿದಿದೆ. ಈ ಮಧ್ಯೆ ರಾಜ್ಯ ಸರ್ಕಾರದ ವತಿಯಿಂದ ಪ್ರತಿವರ್ಷ ನಡೆಯುತ್ತಿದ್ದ ರಾಜ್ಯಮಟ್ಟದ ಆಚರಣೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಗೆ ಕೇವಲ ನಾಲ್ಕು ದಿನ ಬಾಕಿ ಇರುವಾಗ ಮಂಗಳೂರಿನ ಟಿ.ಎಂ.ಎ ಪೈ ಹಾಲ್ ನಲ್ಲಿ ನಡೆಸಲು ಏಕಾಏಕಿ ತೀರ್ಮಾನಿಸಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ಮತ್ತೊಮ್ಮೆ ನಾರಾಯಣಗುರುಗಳ ಹೆಸರಲ್ಲಿ ಗೊಂದಲ ಸೃಷ್ಟಿಸಲು ಮಾಡಿರುವ ಷಡ್ಯಂತ್ರವೇ? ಅಥವಾ ಅಸಮಾಧಾನದಲ್ಲಿರುವ ಬಿಲ್ಲವ ಸಮುದಾಯದ ಕಣ್ಣೊರೆಸುವ ತಂತ್ರವೇ? ಅಷ್ಟಕ್ಕೂ ದಕ್ಷಿಣ ಕನ್ನಡದಲ್ಲೇ ಆಚರಣೆ ಮಾಡಬೇಕಂತಿದ್ದರೆ ಮೊದಲೇ ನಿರ್ಧಾರ ಮಾಡಬೇಕಿತ್ತು. ಒಂದು ವೇಳೆ ತಿಂಗಳ ಮೊದಲೇ ಮಂಗಳೂರಿನಲ್ಲಿ ನಡೆಸುವ ನಿರ್ಧಾರ ತೆಗೆದುಕೊಳ್ಳುತ್ತಿದ್ದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಂದಿರಗಳಲ್ಲಿ ಪೂರಕವಾಗಿ ವ್ಯವಸ್ಥೆಗಳನ್ನು ಮಾಡಬಹುದಿತ್ತು. ಈ ಬಾರಿ ಇಷ್ಟು ಗೊಂದಲ ಮಾಡುವುದಕ್ಕಿಂತ ಗೌರವಪೂರ್ವಕವಾಗಿ ವಿಧಾನಸೌಧದಲ್ಲಿ ಆಚರಣೆ ಮಾಡಿ, ಮುಂದಿನ ವರ್ಷ ಮೊದಲೇ ನಿರ್ಧಾರ ಕೈಗೊಂಡು ಮಂಗಳೂರಿನಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಿ. ಗುರುಗಳ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಗುರುಗಳ ಅನುಯಾಯಿಗಳು ಸಹಿಸಲ್ಲ ಎಂದು ಪದ್ಮರಾಜ್ ಎಚ್ಚರಿಕೆ ನೀಡಿದ್ದಾರೆ.