ಬೆಂಗಳೂರು: ಕರ್ನಾಟಕದಾದ್ಯಂತ ವಿಶೇಷವಾಗಿ ಬೆಂಗಳೂರಿನಲ್ಲಿ ಕಳೆದ 90 ವರ್ಷಗಳಲ್ಲಿ ಆಗದಷ್ಟು ಅತಿವೃಷ್ಟಿಯಾಗಿದೆ. ಸವಾಲಿನ ಪರಿಸ್ಥಿತಿಯಲ್ಲಿಯೂ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಸತತವಾಗಿ ಮಳೆಯಾಗುತ್ತಿರುವುದರಿಂದ ಎಲ್ಲಾ ಕೆರೆಗಳು ತುಂಬಿದ್ದು ಕೆಲವು ಕೋಡಿ ಹರಿದಿದೆ. ಕೆಲವು ಕೆರೆಗಳು ಬಿರುಕು ಬಿಟ್ಟಿವೆ. ಇಡೀ ಬೆಂಗಳೂರು ಜಲಾವೃತವಾಗಿದೆ ಎಂದು ಬಿಂಬಿಸಲಾಗುತ್ತಿದೆ. ಎರಡು ವಲಯಗಳು, ಅದರಲ್ಲೂ ಮಹದೇವಪುರ ವಲಯ ಸಮಸ್ಯೆಗೆ ಒಳಗಾಗಿದೆ. 69 ಕೆರೆಗಳು ಈ ಪ್ರದೇಶದಲ್ಲಿವೆ. ಎಲ್ಲವೂ ಕೋಡಿ ಹರಿದಿವೆ. ಎಲ್ಲಾ ಕಟ್ಟಡಗಳು ಕೆಳ ಮಟ್ಟದಲ್ಲಿವೆ ಹಾಗೂ ಒತ್ತುವರಿ ಕೂಡ ಆಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ನಮ್ಮ ಅಧಿಕಾರಿಗಳು, ಇಂಜಿನಿಯರ್ ಗಳು, ಎಸ್.ಡಿ.ಆರ್.ಎಫ್ ತಂಡಗಳು 24/ 7 ಕೆಲಸ ಮಾಡುತ್ತಿವೆ. ಸಾಕಷ್ಟು ಒತ್ತುವರಿಯನ್ನು ನಾವು ತೆರವುಗೊಳಿಸಿದ್ದೇವೆ.
ತೆರವುಗೊಳಿಸುವ ಕಾರ್ಯವನ್ನು ಮುಂದುವರೆಸಲಾಗುವುದು. ಕೆರೆಗಳ ನಿರ್ವಹಣೆಗೆ ಸ್ಲೂಯಿಸ್ ಗೇಟ್ ಗಳನ್ನು ಅಳವಡಿಸಲಾಗುತ್ತಿದೆ. ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡುವಂತೆ ಸೂಚಿಸಿದ್ದು, ಕರೆ ಬಂದ ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ತಿಳಿಸಲಾಗಿದೆ. ನೀರು ತೆಗೆಯುವ ಕೆಲಸ ಜಾರಿಯಲ್ಲಿದೆ. ಒಂದೆರಡು ಸ್ಥಳಗಳಲ್ಲಿ ಸಮಸ್ಯೆ ಬಿಟ್ಟರೆ ಉಳಿಡೆದೆ ನೀರು ಹೊರತೆಗೆಯಲಾಗಿದೆ. ಮಳೆ ನಿರಂತರವಾಗಿ ಸುರಿ ಯುತ್ತಿರುವುದರಿಂದ ಕೆಲಸ ವಿಳಂಬವಾಗುತ್ತಿದೆ ಎಂದರು.
ನೀರು ಸರಬರಾಜಿನಲ್ಲಿ ವ್ಯತ್ಯಯ: ಸಾರ್ವಜನಿಕರು ಸಹಕರಿಸಬೇಕು
ನಿನ್ನೆ ಜಲಾವೃತವಾಗಿದ್ದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಟಿ. ಕೆ ಹಳ್ಳಿ ನೀರು ಸರಬರಾಜು ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಭೀಮೇಶ್ವರ ನದಿ ಉಕ್ಕಿ ಹರಿದು ಪಂಪ್ ಹೌಸ್ ಗೆ ನುಗ್ಗಿತ್ತು. 2 ಪಂಪ್ ಹೌಸ್ ಗಳಿಗೆ ಹಾನಿಯಾಗಿದ್ದು, ಒಂದು ಪಂಪ್ ಹೌಸ್ ನಲ್ಲಿದ್ದ ನೀರು ಹೊರಗೆ ಹಾಕಲಾಗಿದೆ. ಇಂದು ರಾತ್ರಿಯೊಳಗೆ 230 ಎಂ.ಎಲ್.ಡಿ ನೀರು ಸರಬರಾಜು ಪ್ರಾರಂಭವಾಗಲಿದೆ. 550 ಎಂ.ಎಲ್.ಡಿ ನೀರು ಸರಬರಾಜು ಮಾಡುವ ಪಂಪ್ ಹೌಸ್ ನ ನೀರನ್ನು ತೆಗೆಯಲು 2 ದಿನಗಳಾಗುತ್ತವೆ. ಈ ಮಧ್ಯೆ ಜಲಮಂಡಳಿಯ 8000 ಹಾಗೂ ಬಿಬಿಎಂಪಿ ವ್ಯಾಪ್ತಿಯ 4000 ಕೊಳವೆಬಾವಿಗಳನ್ನು ಸಕ್ರಿಯ ಗೊಳಿಸಲಾಗುವುದು ಹಾಗೂ ಟ್ಯಾಂ ಕರ್ ಮೂಲಕ ನೀರು ಸರಬರಾಜು ಮಾಡಲು ವ್ಯವಸ್ಥೆ ಕೈಗೊಳ್ಳಲಾಗುವುದು. ಇನ್ನೆರೆಡು ದಿನಗಳ ಕಾಲ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಕೇಂದ್ರದಿಂದ ಸೂಕ್ತ ಪರಿಹಾರ
ಕೇಂದ್ರ ಅಧ್ಯಯನ ತಂಡ ಇಂದು ಭೇಟಿ ನೀಡಲಿದ್ದು, ರಾಜ್ಯ ಹಾಗೂ ಬೆಂಗಳೂರಿನ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಬೆಳೆ, ಮನೆಗಳು ಹಾಗೂ ಮೂಲಸೌಕರ್ಯ ಹಾನಿಯ ಬಗ್ಗೆ ಮಾಹಿತಿ ನೀಡಲಾಗುವುದು. ಹಾಗೂ ಸೂಕ್ತ ಪರಿಹಾರವನ್ನು ಕೇಂದ್ರ ಒದಗಿಸಲಾಗುವುದು ಎಂದರು.
ಪಿ.ಎಸ್.ಐ ನೇಮಕಾತಿ
ಪಿ.ಎಸ್.ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿದ್ದು ಆರೋಪಪಟ್ಟಿ ಸಲ್ಲಿಸಲಾಗಿದೆ. ಹೊಸದೇನೆ ಆದರೂ ತನಿಖೆ ಕೈಗೊಳ್ಳಲಾಗುವುದು ಎಂದರು.