ಪಿಎಸ್ ಐ ನೇಮಕಾತಿ ಹಗರಣ: 15 ಲಕ್ಷ ರೂ. ಪಡೆದ ಬಿಜೆಪಿ ಶಾಸಕ: ಆಡಿಯೋ ವೈರಲ್

Prasthutha|

ಬೆಂಗಳೂರು: ಪಿಎಸ್ ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಒಂದೊಂದೇ ಸಾಕ್ಷ್ಯಗಳು ಬಹಿರಂಗಗೊಳ್ಳುತ್ತಿದ್ದು, ಇದೀಗ ಬಿಜೆಪಿ ಶಾಸಕರೊಬ್ಬರು ಹಣ ಪಡೆದ ಸಂಬಂಧದ ಆಡೀಯೋವೊಂದು ಬಹಿರಂಗವಾಗಿದೆ.

- Advertisement -

ಸಾಮಾಜಿಕ ಜಾಲತಾಣದಲ್ಲಿ ಹಗರಣಕ್ಕೆ ಸಂಬಂಧಿಸಿದ ಫೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಬಳ್ಳಾರಿ ಜಿಲ್ಲೆ ಸಿರುಗುಪ್ಪ ಮೂಲದ ಪರಸಪ್ಪ ಬೇಗೂರು ಎಂಬುವರು ತನ್ನ ಮಗನನ್ನು ಪಿಎಸ್ ಐ ಮಾಡಲು 15 ಲಕ್ಷ ರೂ. ಹಣವನ್ನು ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸುಗೂರು ಅವರಿಗೆ ನೀಡಿರುವುದು, ನೇಮಕಾತಿ ಆಗದ ಹಿನ್ನೆಲೆಯಲ್ಲಿ ಹಣವನ್ನು ವಾಪಸ್ಸು ಕೇಳುತ್ತಿರುವುದು ಆಡೀಯೋದಲ್ಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಬಸವರಾಜ ದಢೇಸಗೂರ, ವೈರಲ್ ಆಗಿರುವ ಆಡಿಯೋದಲ್ಲಿ ಇರುವ ಧ್ವನಿ ನನ್ನದೇ ಆಗಿದೆ. ನಾನು ಯಾರಿಂದಲೂ ಹಣ ಪಡೆದಿಲ್ಲ. ಇಬ್ಬರ ನಡುವೆ ನಡೆದ ಜಗಳವನ್ನು ಇತ್ಯರ್ಥಪಡಿಸಲು ನನ್ನ ಬಳಿ ಬಂದಿದ್ದರು. ಇಬ್ಬರ ನಡುವೆ ರಾಜಿ ಪಂಚಾಯಿತಿ ನಡೆಸಿದ್ದೇನೆ. ಅದರ ಆಡಿಯೋ ಈಗ ವೈರಲ್ ಮಾಡಿದ್ದಾರೆ.

- Advertisement -

 ಲಂಚದ ಪ್ರಕರಣದ ಕುರಿತು ಮಧ್ಯಸ್ಥಿಕೆ ವಹಿಸಲು ನನ್ನೊಂದಿಗೆ ಮಾತನಾಡಿದ್ದು ನಾನು ಇದನ್ನು ಬಗೆಹರಿಸುತ್ತೇನೆ ಎಂದು ಹೇಳಿದ್ದೆ. ನಾನು ಹಿರಿಯನಾಗಿ ಮಾತನಾಡಿದ್ದೇನೆ. ಇದರಲ್ಲಿ ನಾನು ಹಣ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಯಾರೋ ರೆಕಾರ್ಡ್ ಮಾಡಿ ಬಿಟ್ಟಿದ್ದಾರೆ. ನಾನು ಸರ್ಕಾರಕ್ಕೆ ಹಣ ಕೊಟ್ಟಿದ್ದೇನೆ ಎಂದು ಹೇಳಿಲ್ಲ ಎಂದು ಶಾಸಕ ಬಸವರಾಜ ದಡೇಸಗೂರು ತಿಳಿಸಿದರು.

ಚುನಾವಣಾ ವರ್ಷವಿದ್ದು, ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಹೀಗಾಗಿ ಆಡಿಯೊ, ವಿಡಿಯೊ ವೈರಲ್ ಮಾಡುತ್ತಿದ್ದಾರೆ ಎಂದರು

ಪಿಎಸ್ ಐ‌ ನೇಮಕಾತಿ ಮಾಡಿಸುವುದಾಗಿ‌ ಹೇಳಿ ವ್ಯಕ್ತಿಯೊಬ್ಬರಿಂದ 15 ಲಕ್ಷ ಪಡೆದ ಬಗ್ಗೆ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಢೇಸಗೂರ ಅವರ ಮೇಲೆ ಆರೋಪ ಕೇಳಿಬಂದಿದೆ.

ಈ ಕುರಿತು ಆಡಿಯೊ ವೈರಲ್ ಆಗಿದೆ. ಪರಸಪ್ಪ ಬೇಗೂರು ಎಂಬುವರು ಶಾಸಕರಿಗೆ ಪೋನ್ ಮಾಡಿ ನನ್ನ ಮಗನ ಪಿಎಸ್ ಐ‌ ನೇಮಕಾತಿಗೆ ಕೊಟ್ಟ 15 ಲಕ್ಷ ಹಣವನ್ನು ವಾಪಸ್ ಕೊಡಿ ಎಂದು ‌ಕೇಳಿದ್ದಾರೆ. ಇದಕ್ಕೆ ಶಾಸಕ ಹೌದು ನೀನು ದುಡ್ಡು ‌ಕೊಟ್ಟಿದ್ದೀಯಾ, ವಾಪಸ್ ಕೊಡ್ತೀನಿ ಅಂತ ಹೇಳಿನಲ್ಲ ಎನ್ನುವ ಮಾತುಗಳು ಆಡಿಯೊದಲ್ಲಿದೆ.

ಕಿಂಗ್ ಪಿನ್ ಸಂಬಂಧಿ ಸೆರೆ:

ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧ ಕಲ್ಯಾಣ ಕರ್ನಾಟಕ ಕೋಟಾದಡಿ 22ನೇ ರ್ಯಾಂಕ್ ಪಡೆದಿದ್ದ ಸಿದ್ದು ಎಂಬಾತನನ್ನು ಕಲಬುರ್ಗಿಯ ಸಿಐಡಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಬಂಧಿತ ಅಭ್ಯರ್ಥಿ ಸಿದ್ದಗೌಡ ಯಾದಗಿರಿ ತಾಲೂಕಿನ ಮುದ್ನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಫ್ ​ಡಿಎ ಆಗಿ ಕೆಲಸ ಮಾಡುತ್ತಿದ್ದ.

22ನೇ ರ್ಯಾಂಕ್  ಪಡೆದಿದ್ದ ಸಿದ್ದಗೌಡ ಇದಕ್ಕೂ ಮೊದಲು ಎರಡು ಬಾರಿ ಸಿಐಡಿ ವಿಚಾರಣೆಗೆ ಹಾಜರಾಗಿದ್ದ. ವಿಚಾಣೆಗೆಂದು ಕರೆದುಕೊಂಡು ಬಂದು ಬಂಧನ ಮಾಡಲಾಗಿದೆ.

ಸಿದ್ದುಗೌಡ ಅಭ್ಯರ್ಥಿ ಹಾಗೂ ಮದ್ಯವರ್ತಿಯೂ ಆಗಿದ್ದ. ಬಂಧಿತ ಸಿದ್ದು, ಹಗರಣದ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಸಂಬಂಧಿ ಎಂಬುದು ಗಮನಾರ್ಹ. ಹಗರಣ ಬಯಲಾಗುತ್ತಿದ್ದ ಹಾಗೆಯೇ ಜೂನ್ 4 ರಿಂದ 19 ರ ವರೆಗೆ ಅನಾರೋಗ್ಯದ ನೆಪವೊಡ್ಡಿ ಸಿದ್ದು ರಜೆಯಲ್ಲಿದ್ದ.

ರಾಜೀನಾಮೆಗೆ ಆಗ್ರಹ:

ಪಿಎಸ್ ಐ‌ ನೇಮಕ ಮಾಡಿಸಿಕೊಡುವುದಾಗಿ ಹೇಳಿ ಹಣ ಪಡೆದ ಆರೋಪ ಎದುರಿಸುತ್ತಿರುವ ಕನಕಗಿರಿ ಶಾಸಕ ಬಸವರಾಜ ದಢೇಸಗೂರ ಅವರನ್ನು ಬಂಧಿಸಬೇಕು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಆಗ್ರಹಿಸಿದರು. ಇಲ್ಲವಾದರೆ ಹೋರಾಟ‌ ಮಾಡಲಾಗುವುದು ಎಂದರು.




Join Whatsapp