ಒಟ್ಟಾವ: ಕೆನಡಾದ ಸಾಸ್ಕಾಚೆವಾನ್ ಪ್ರಾಂತ್ಯದಲ್ಲಿ ಸರಣಿ ಚೂರಿ ಇರಿತ ಪ್ರಕರಣದಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಶಂಕಿತರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಕೆನಾಡದ ಜೀಮ್ಸ್ ಸ್ಮಿತ್ ಕ್ರೀ ನೇಷನ್ ಎಂಬಲ್ಲಿನ ಮೂಲ ನಿವಾಸಿಗಳ ಮೇಲೆ ಮತ್ತು ಸಾಸ್ಕಾಚೆವಾನ್’ನ ವೆಲ್ಡನ್ ನಗರದಲ್ಲಿ ನಡೆದ ಸರಣಿ ಚೂರಿ ಇರಿತದಲ್ಲಿ 10 ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿದ್ದಾರೆ.
ಘಟನೆಯ ಬಳಿಕ ತುರ್ತು ಕರೆಗೆ ಪೊಲೀಸರು ಸ್ಪಂದಿಸಿದ್ದು, ಜೇಮ್ಸ್ ಸ್ಮಿತಿ ಕ್ರೀ ನೇಷನ್ ಮತ್ತು ಸಾಸ್ಕಾಚೆವಾನ್’ ನ ಸಮೀಪದ ವೆಲ್ಡನ್ ನಗರದಲ್ಲಿ ನಡೆದ ಚೂರಿ ಇರಿತದಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಠಾಣೆಯ ಸಹಾಯಕ ಪೊಲೀಸ್ ಕಮಿಷನರ್ ರೋಂಡಾ ಬ್ಲಾಕ್’ಮೋರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಘಟನೆಯಲ್ಲಿ ಕನಿಷ್ಠ 15 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಇದರಲ್ಲಿ ಭಾಗಿಯಾದ ಇಬ್ಬರು ಶಂಕಿತರನ್ನು ಹುಡುಕಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ದಾಳಿಕೋರರು ತಮ್ಮ ವಾಹನದಲ್ಲಿ ಪರಾರಿಯಾಗಿದ್ದು, ಶಂಕಿತರನ್ನು ಕ್ರಮವಾಗಿ ಮೈಲ್ಸ್ ಸ್ಯಾಂಡರ್ಸನ್ ಮತ್ತು ಡೇಮಿಯನ್ ಸ್ಯಾಂಡರ್ಸನ್ ಎಂದು ಗುರುತಿಸಲಾಗಿದೆ.
ಸದ್ಯ 2500 ಜನಸಂಖ್ಯೆಯನ್ನು ಹೊಂದಿರುವ ಜೇಮ್ಸ್ ಸ್ಮಿತ್ ಕ್ರೀ ನೇಷನ್ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಸಾಸ್ಕಾಚೆವಾನ್ ಪ್ರಾಂತ್ಯದ ಅನೇಕ ನಿವಾಸಿಗಳು ರಕ್ಷಣ ನೀಡುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.
ಅಮಾಯಕರ ಮೇಲಿನ ಈ ದಾಳಿಯನ್ನು ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಖಂಡಿಸಿದ್ದು, ಈ ದಾಳಿ ಭಯಾನಕ ಮತ್ತು ಹೃದಯವಿದ್ರಾವಕ ಎಂದು ಟ್ವೀಟ್ ಮಾಡಿದ್ದಾರೆ ಮತ್ತು ಅಧಿಕಾರಿಗಳು ನೀಡುವ ಸೂಚನೆಗಳನ್ನು ಪಾಲಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.