ಮುರುಘಾ ಶ್ರೀಗಳಿಗೆ ಸೆ.14ರವರೆಗೆ ನ್ಯಾಯಾಂಗ ಬಂಧನ

Prasthutha|

ಚಿತ್ರದುರ್ಗ: ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಮಠದ ಶಿವಮೂರ್ತಿ ಶ್ರೀಗಳಿಗೆ ನ್ಯಾಯಾಲಯವು 9 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಕಳೆದ ನಾಲ್ಕು ದಿನಗಳಿಂದ ಪೊಲೀಸ್ ವಶದಲ್ಲಿದ್ದ ಶಿವಮೂರ್ತಿ ಶ್ರೀಗಳ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ನಗರದ 2 ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು.

ನ್ಯಾಯಾಲಯಕ್ಕೆ ಹಾಜರಾದ ಶ್ರೀಗಳ ಅರ್ಜಿ ವಿಚಾರಣೆ ನಡೆಸಿದ ಚಿತ್ರದುರ್ಗದ 2 ನೇ ಹೆಚ್ಚುವರಿ ನ್ಯಾಯಾಲಯ ಮುರುಘಾಶ್ರೀಗಳಿಗೆ ಸೆಪ್ಟೆಂಬರ್ 14 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ನ್ಯಾಯಾಂಗ ಬಂಧನಕ್ಕೆ ನೀಡಿದ ಶ್ರೀಗಳನ್ನು ಪೊಲೀಸರು ಕರೆದೊಯ್ದರು.

- Advertisement -

ನ್ಯಾಯಾಂಗ ಬಂಧನಕ್ಕೆ ನೀಡಿದ ಶ್ರೀಗಳನ್ನು ಜೈಲಿಗೆ ಕರೆದೊಯ್ದು ಮತ್ತೆ ವೈದ್ಯಕೀಯ ತಪಾಸಣೆ ನಡೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬಾಲಕಿಯರ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸೆ.1ರಂದು ಬಂಧನಕ್ಕೆ ಒಳಗಾಗಿರುವ ಶಿವಮೂರ್ತಿ ಮುರುಘಾ ಶರಣರನ್ನು ನಿನ್ನೆ ಮುರುಘಾ ಮಠಕ್ಕೆ ಕರೆತಂದ ಪೊಲೀಸರು, ಅವರು ತಂಗುತ್ತಿದ್ದ ಕೊಠಡಿಯ ಮಹಜರು ನಡೆಸಿದ್ದರು.

ಪೊಲೀಸ್ ವಾಹನದಲ್ಲಿ ಆರೋಪಿಯನ್ನು ಮಠಕ್ಕೆ ಕರೆದೊಯ್ದ ತನಿಖಾ ತಂಡ, ಅವರು ತಂಗುತ್ತಿದ್ದ ಕೊಠಡಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನೂ ಪರಿಶೀಲಿಸಿದೆ. ಅಂದಾಜು ಎರಡೂವರೆ ಗಂಟೆ ಮಹಜರು ನಡೆಸಿದ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾದ ಮುರುಘಾ ಶರಣರನ್ನು ಮಠಕ್ಕೆ ಕರೆದೊಯ್ದು ಮಹಜರು ಮಾಡಲಾಗಿದೆ. ಅವರು ತಂಗುತ್ತಿದ್ದ ಕೊಠಡಿಯಲ್ಲಿ ದೋಷಾರೋಪಕ್ಕೆ ಪೂರಕವಾಗಿ ಲಭ್ಯವಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಇನ್ನೂ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಹೇಳಿದ್ದಾರೆ.

ಸಿಆರ್ ಪಿಸಿ ಸೆಕ್ಷನ್ 164ರ ಅಡಿ ಸಂತ್ರಸ್ತ ಬಾಲಕಿಯರು ನ್ಯಾಯಾಲಯದಲ್ಲಿ ದಾಖಲಿಸಿದ ಹೇಳಿಕೆಯ ಪ್ರತಿಯು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಯ ಕೈಸೇರಿದೆ. ಇದರಲ್ಲಿರುವ ಅಂಶಗಳ ಆಧಾರದಲ್ಲಿ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಲೈಂಗಿಕ ದೌರ್ಜನ್ಯ ಎಸಗಿದ್ದರು ಎನ್ನಲಾದ ಸ್ಥಳಕ್ಕೆ ಆರೋಪಿಯೊಂದಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ.

ಈ ನಡುವೆ ಪ್ರಕರಣದ ತನಿಖಾಧಿಕಾರಿ ಆಗಿರುವ ಡಿವೈಎಸ್ ಪಿ ಅನಿಲ್ ಕುಮಾರ್ ನೇತೃತ್ವದ ತಂಡ ಕೇಳಿದ ಪ್ರಶ್ನೆಗಳಿಗೆ ಆರೋಪಿಯಿಂದ ಸಮರ್ಪಕ ಉತ್ತರ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ವಿಚಾರಣೆ ನಡೆಸುತ್ತಿರುವ ಡಿವೈಎಸ್ ಪಿ ಕಚೇರಿ ಆವರಣದಲ್ಲಿಯೇ ವೈದ್ಯರ ತಂಡ ಬೀಡುಬಿಟ್ಟಿದೆ. ಆರೋಪಿಯನ್ನು ಆಗಾಗ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಆರೋಗ್ಯದ ಮೇಲೆ ನಿಗಾ ಇಟ್ಟು ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮುರುಘಾ ಮಠಕ್ಕೆ ತೆರಳಿದಂತೆ ಸ್ಥಳ ಮಹಜರ್ ವೇಳೆಯಲ್ಲಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಠಕ್ಕೆ ಬಂದ ಶ್ರೀಗಳ ಕಂಡಂತ ಅವರ ಶಿಷ್ಯವೃಂದವು, ಸ್ವಾಮೀಜಿ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿರುವ ಬಗ್ಗೆ ತಿಳಿದು ಬಂದಿದೆ.

ಶ್ರೀಗಳ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಹಾಸ್ಟೆಲ್ ನಲ್ಲಿದ್ದ ಎಲ್ಲ ವಿದ್ಯಾರ್ಥಿನಿಯರನ್ನೂ ಆಗಸ್ಟ್ 31ರಂದು ಮಠದ ಆವರಣದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

5ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡುತ್ತಿದ್ದ 105 ವಿದ್ಯಾರ್ಥಿನಿಯರು ಹಾಸ್ಟೆಲ್ ನಲ್ಲಿದ್ದರು. ಗಣೇಶ ಹಬ್ಬದ ಹಿಂದಿನ ದಿನ 54 ಮಕ್ಕಳು ಪಾಲಕರೊಂದಿಗೆ ಊರಿಗೆ ತೆರಳಿದ್ದರು. ಉಳಿದವರಲ್ಲಿ 12 ಮಕ್ಕಳಿಗೆ ಬಾಲಕಿಯರ ಬಾಲಮಂದಿರ ಹಾಗೂ 37 ಮಕ್ಕಳಿಗೆ ಗೂಳಯ್ಯನಹಟ್ಟಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಇಬ್ಬರು ಸಂತ್ರಸ್ತ ವಿದ್ಯಾರ್ಥಿನಿಯರನ್ನು ಬಾಲಕಿಯರ ಬಾಲಮಂದಿರಕ್ಕೆ ಕಳುಹಿಸಲಾಗಿತ್ತು’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ. ಲೋಕೇಶ್ವರಪ್ಪ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಶ್ರೀಗಳ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧ ಕೈಗೊಂಡಿರುವ ತನಿಖಾ ಕ್ರಮಗಳ ಕುರಿತು ರಾಜ್ಯ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಆಯೋಗ ವಿವರವಾದ ವರದಿ ಕೇಳಿದೆ.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಆಯೋಗದ ಕಾರ್ಯದರ್ಶಿ ಈ ಸಂಬಂಧ ಪತ್ರ ಬರೆದಿದ್ದು ವರದಿ ನೀಡಲು ಸಿದ್ದತೆ ಕೈಗೊಳ್ಳಲಾಗಿದೆ.



Join Whatsapp