ಎಎಪಿ ಬಗ್ಗೆ ಮಾತಾಡುವ ನೈತಿಕತೆ ಸಿ.ಟಿ.ರವಿಗೆ ಇಲ್ಲ: ಮುಕುಂದ್‌ ಗೌಡ

Prasthutha|

ಬೆಂಗಳೂರು: ಪಾರದರ್ಶಕ ಆಡಳಿತದಲ್ಲಿ ದೃಢವಾದ ನಂಬಿಕೆ ಹೊಂದಿರುವ ಆಮ್‌ ಆದ್ಮಿ ಪಾರ್ಟಿ ಬಗ್ಗೆ ಮಾತನಾಡುವ ನೈತಿಕತೆಯು ಬಿಜೆಪಿ ಶಾಸಕ ಸಿ.ಟಿ.ರವಿಯವರಿಗೆ ಇಲ್ಲ ಎಂದು ಎಎಪಿಯ ರಾಜ್ಯ ಯುವ ಘಟಕದ ಅಧ್ಯಕ್ಷ ಮುಕುಂದ್‌ ಗೌಡ ಹೇಳಿದರು.

- Advertisement -

ಆಮ್‌ ಆದ್ಮಿ ಪಾರ್ಟಿಯ ವಿರುದ್ಧ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಕುಂದ್‌ ಗೌಡ, “ಒಂದು ಕಾಲದಲ್ಲಿ ಒಂದು ಜೊತೆ ಬಟ್ಟೆಯೂ ಸರಿಯಾಗಿಲ್ಲದೇ, ಬಾಬಾ ಬುಡನ್‌ಗಿರಿ ಫೈಲುಗಳನ್ನು ಹೊತ್ತುಕೊಂಡು ಆರೆಸ್ಸೆಸ್‌ ಕಚೇರಿ ಅಲೆಯುತ್ತಿದ್ದ ಸಿ.ಟಿ.ರವಿಯವರ ಈಗಿನ ಆಸ್ತಿ ಎಷ್ಟು? ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನು ಹೇಗೆ ಸಂಪಾದಿಸಿದರೆಂದು ಅವರು ರಾಜ್ಯದ ಜನತೆಗೆ ತಿಳಿಸಲಿ. ದೇವನಹಳ್ಳಿಯ ಭೂ ಹಗರಣದಿಂದ ತಪ್ಪಿಸಿಕೊಳ್ಳಲು ಸಿ.ಟಿ.ರವಿ ಕಾಂಗ್ರೆಸ್ ನಾಯಕರ ಬೂಟು ನೆಕ್ಕಿದ್ದ ಎಲ್ಲರಿಗೂ ಗೊತ್ತಿರುವ ವಿಚಾರ. ಕುಡಿದು ಪಾನಮತ್ತನಾಗಿ ಕಾರು ಓಡಿಸಿ ಅಮಾಯಕ ಯುವಕರನ್ನು ಬಲಿ ತೆಗೆದುಕೊಂಡ ರವಿ ಎಂತಹರವರು ಎಂಬುದು ಜನರಿಗೆ ತಿಳಿದಿದೆ” ಎಂದು ಹೇಳಿದರು.

“ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹೆಚ್ಚು ಹಣ ಕೊಳ್ಳೆ ಹೊಡೆಯಲು ಸಾಧ್ಯವಿಲ್ಲವೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸ್ಥಾನವನ್ನೇ ಕಾಲಲ್ಲಿ ಒದ್ದವರು ಸಿ.ಟಿ.ರವಿ. ಪಾರದರ್ಶಕತೆಗೆ ಆದ್ಯತೆ ನೀಡುವ ಮೂಲಕ ದೇಶದ ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸುತ್ತಿರುವ ಆಮ್‌ ಆದ್ಮಿ ಪಾರ್ಟಿಯ ಹೆಸರು ಹೇಳುವ ಯೋಗ್ಯತೆ ಕೂಡ ಸಿ.ಟಿ.ರವಿಯವರಿಗೆ ಇಲ್ಲ. ರವಿಯವರು ಯಾವ್ಯಾವ ಕಾಂಗ್ರೆಸ್ ನಾಯಕರೊಂದಿಗೆ ಸೇರಿಕೊಂಡು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸಿ ನೂರಾರು ಕೋಟಿ ಸಂಪಾದನೆ ಮಾಡಿದ್ದಾರೆಂಬುದನ್ನು ಜನತೆಯ ಮುಂದಿಡಲಿ” ಎಂದು ಮುಕುಂದ್‌ ಗೌಡ ಸವಾಲು ಹಾಕಿದರು.

- Advertisement -

“ಸಿ.ಟಿ.ರವಿಯವರು ದೆಹಲಿಗೆ ತೆರಳಿ ಎಎಪಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಲು ಸಿದ್ಧರಿದ್ದರೆ ಅವರಿಗೆ ಅವಕಾಶ ಕಲ್ಪಿಸಿಕೊಡುತ್ತೇವೆ. ಭೇಟಿಗೆ ಅವರೇ ದಿನಾಂಕ ಹಾಗೂ ಸಮಯ ನಿಗದಿಪಡಿಸಲಿ. ಅತ್ಯಾಧುನಿಕ ಸೌಲಭ್ಯಗಳುಳ್ಳ ಸರ್ಕಾರಿ ಶಾಲೆಗಳು, ಮೊಹಲ್ಲಾ ಕ್ಲಿನಿಕ್‌ಗಳು ಸೇರಿದಂತೆ ದೆಹಲಿ ಎಎಪಿ ಸರ್ಕಾರ ತಂದ ನೂರಾರು ಕ್ರಾಂತಿಕಾರಿ ಬದಲಾವಣೆಗಳನ್ನು ಅವರು ಪರಿಶೀಲಿಸಿ, ನಂತರವಷ್ಟೇ ಆ ಬಗ್ಗೆ ಮಾತನಾಡಲಿ. ಭ್ರಷ್ಟ ಬಿಜೆಪಿಯ 40% ಕಮಿಷನ್‌ ಸರ್ಕಾರದ ಕಳಪೆ ಕಾಮಗಾರಿಗಳಿಗೂ ಎಎಪಿ ಸರ್ಕಾರದ ಗುಣಮಟ್ಟದ ಕಾಮಗಾರಿಗಳಿಗೂ ಇರುವ ವ್ಯತ್ಯಾಸವು ಸಿ.ಟಿ.ರವಿಯವರಿಗೆ ಅರ್ಥವಾಗುತ್ತಿಲ್ಲ” ಎಂದು ಮುಕುಂದ್‌ ಗೌಡ ಹೇಳಿದರು.



Join Whatsapp