ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಖತರ್ನಾಕ್ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೋಣನಕುಂಟೆ ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದಾರೆ.
ಮಹೇಶ್ ಕೊಲೆಯಾದ ದುರ್ದೈವಿ. ಮಂಡ್ಯ ಮೂಲದ ಮಹೇಶ್, ಶಿಲ್ಪಾಳನ್ನು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ. ಮದುವೆಯಾದ ಬಳಿಕ ಇಬ್ಬರು ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು.
ಸೆ.1ರಂದು ಮಹೇಶ್ ನನ್ನು ಶಿಲ್ಪಾ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿದ್ದರು. ನಂತರ ಪಿಡ್ಸ್ ಬಂದು ಮೃತಪಟ್ಟಿದ್ದಾನೆಂದು ನಾಟಕವಾಡಿ, ಮೃತದೇಹವನ್ನು ಶಿಲ್ಪಾ ಮಹೇಶ್ ಹುಟ್ಟೂರಿಗೆ ತೆಗೆದುಕೊಂಡು ಹೋಗಿದ್ದಳು. ಆದರೆ ಈ ವೇಳೆ ಅನುಮಾನಗೊಂಡ ಮಹೇಶ್ ಪಾಲಕರು ಮೃತದೇಹವನ್ನು ಪರೀಕ್ಷಿಸಿದ್ದರು.
ಮೃತದೇಹದ ಮೇಲೆ ಗಾಯಗಳು ಪತ್ತೆಯಾದ ಬಳಿಕ ಮಂಡ್ಯ ಪೊಲೀಸರಿಗೆ ಪಾಲಕರು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಶಿಲ್ಪಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಪ್ರಕರಣವನ್ನು ಕೋಣನಕುಂಟೆ ಠಾಣೆಗೆ ಮಂಡ್ಯ ಪೊಲೀಸರು ವರ್ಗಾಯಿಸಿದ್ದರು. ಇದೀಗ ಕೋಣನಕುಂಟೆ ಪೊಲೀಸರು ಶಿಲ್ಪಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.