ಐಪಿಎಲ್ನ ಸನ್ರೈಸರ್ಸ್ ಹೈದರಾಬಾದ್ ತಂಡದ ನೂತನ ಕೋಚ್ ಆಗಿ ವೆಸ್ಟ್ ಇಂಡೀಸ್ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ ಬ್ರಿಯಾನ್ ಲಾರಾ ನೇಮಕವಾಗಿದ್ದಾರೆ. ಟಾಮ್ ಮೂಡಿ ಸ್ಥಾನವನ್ನು ಲಾರಾ ತುಂಬಲಿದ್ದಾರೆ.
ಮೇ ತಿಂಗಳಿನಲ್ಲಿ ಕೊನೆಗೊಂಡ 15ನೇ ಆವೃತ್ತಿಯ ಐಪಿಎಲ್ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಎಸ್ಆರ್ಎಚ್ ತಂಡ, ಅಂಕ ಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿತ್ತು. ಒಟ್ಟು 14 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಮತ್ತು 8 ಪಂದ್ಯಗಳಲ್ಲಿ ಸೋಲು ಕಂಡಿತ್ತು.
ಕಳೆದ ಬಾರಿ ಬ್ಯಾಟಿಂಗ್ ಕೋಚ್ ಮತ್ತು ತಾಂತ್ರಿಕ ಸಲಹೆಗಾರನಾಗಿದ್ದ ಲಾರಾ, 2023ರ ಟೂರ್ನಿಯಲ್ಲಿ ತಂಡದ ಹೆಡ್ ಕೋಚ್ ಸ್ಥಾನವನ್ನು ನಿಭಾಯಿಸಲಿದ್ದಾರೆ. ʻಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆವೃತ್ತಿಗಳಲ್ಲಿ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಅವರೇ ನಮಗೆ ಹೆಡ್ ಕೋಚ್ʻ ಎಂದು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ನಲ್ಲಿ ಮಾಹಿತಿ ನೀಡಿದೆ.
2013 ರಿಂದ 2019ರವರೆಗೂ ಟಾಮ್ ಮೂಡಿ, ಸನ್ರೈಸರ್ಸ್ ಹೈದರಾಬಾದ್ ತಂಡದ ಮುಖ್ಯ ಕೋಚ್ ಆಗಿದ್ದರು. ಆ ಬಳಿಕ 2021ರಲ್ಲಿ ನಿರ್ದೇಶಕರಾಗಿ ನೇಮಕಗೊಂಡರು. ಈ ವೇಳೆ ಆಸ್ಟ್ರೇಲಿಯಾದ ಟ್ರೆವರ್ ಬೇಲಿಸ್ ಎಸ್ಆರ್ಎಚ್ನ ಮುಖ್ಯ ತರಬೇತುದಾರರಾಗಿದ್ದರು. 2022ರಲ್ಲಿ ಮುಖ್ಯ ಕೋಚ್ ಸ್ಥಾನವನ್ನು ಮತ್ತೆ ಟಾಮ್ ಮೂಡಿ ವಹಿಸಿಕೊಂಡಿದ್ದರು. ಇವರ ಅವಧಿಯಲ್ಲಿ 2016ರಲ್ಲಿ ಹೈದರಾಬಾದ್ ತಂಡ ಎರಡನೇ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಅಲ್ಲದೆ ಐದು ಬಾರಿ ಪ್ಲೇ ಆಫ್ಗೆ ಪ್ರವೇಶ ಪಡೆದಿತ್ತು .