ಶಾರ್ಜಾ: ಏಷ್ಯಾ ಕಪ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ಅಫ್ಘಾನಿಸ್ತಾನ ತಂಡಕ್ಕೆ, ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಆಘಾತವಿಕ್ಕಿದೆ. ಬಲಿಷ್ಠ ಅಪ್ಘಾನ್ ಬೌಲಿಂಗ್ ಪಡೆಯನ್ನು ದಿಟ್ಟವಾಗಿ ಎದುರಿಸಿದ ಲಂಕಾ ಬ್ಯಾಟ್ಸ್‌ಮನ್‌ಗಳು, ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಈ ಗೆಲುವಿನ ಮೂಲಕ, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅನುಭವಿಸಿದ್ದ ಹೀನಾಯ ಸೋಲಿಗೆ, ಲಂಕಾ ಸೇಡು ತೀರಿಸಿಕೊಂಡಿದೆ.
ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಅಫ್ಘಾನಿಸ್ತಾನ, 6 ವಿಕೆಟ್ ನಷ್ಟದಲ್ಲಿ 175 ರನ್ ಗಳಿಸಿತ್ತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ, 6 ವಿಕೆಟ್ ನಷ್ಟದಲ್ಲಿ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ 179 ರನ್‌ಗಳಿಸಿ ಗೆಲುವಿನ ಸಂಭ್ರವನ್ನಾಚರಿಸಿತು.
ಆರಂಭಿಕರಾದ ಪಾತುಮ್ ನಿಸ್ಸಾಂಕ (35 ರನ್), ಕುಸಾಲ್ ಮೆಂಡಿಸ್ (36 ರನ್), ಧನುಷ್ ಗುಣತಿಲಕ (33 ರನ್) ಹಾಗೂ ನಾಯಕ ಭಾನುಕ ರಾಜಪಕ್ಷ 31 ರನ್ ಗಳಿಸುವ ಮೂಲಕ ಶ್ರೀಲಂಕಾ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.