ಏಷ್ಯಾ ಕಪ್ | ಇಂದಿನಿಂದ ಸೂಪರ್-4 ಹಂತ, ಅಫ್ಘಾನಿಸ್ತಾನ-ಶ್ರೀಲಂಕಾ ಮುಖಾಮುಖಿ

Prasthutha|

ದುಬೈ: ಯುಎಇನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಸೂಪರ್-4 ಹಂತದ ಪಂದ್ಯಗಳಿಗೆ ಶನಿವಾರ ಶಾರ್ಜಾದಲ್ಲಿ ಚಾಲನೆ ದೊರೆಯಲಿದೆ. ‘ಎ’ ಗುಂಪಿನಿಂದ ಭಾರತ ಮತ್ತು ಪಾಕಿಸ್ತಾನ, ʻಬಿʼ ಗುಂಪಿನಿಂದ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೂಪರ್ 4 ಹಂತ ಪ್ರವೇಶಿಸಿವೆ.

- Advertisement -

ಸೂಪರ್ 4 ಹಂತದಲ್ಲಿ ಒಟ್ಟು 6 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಎಲ್ಲಾ ನಾಲ್ಕು ತಂಡಗಳು ತಲಾ ಒಂದು ಬಾರಿ ಸೂಪರ್ 4 ಹಂತದಲ್ಲಿ ಮುಖಾಮುಖಿಯಾಗಲಿವೆ.
ಏಷ್ಯಾ ಕಪ್ ನ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಅಫ್ಘಾನಿಸ್ತಾನ 9 ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಲಂಕಾ ತಂಡ 5 ರನ್ ಗಳಿಸುವಷ್ಟರಲ್ಲಿಯೇ 3 ವಿಕೆಟ್ ಕಳೆದುಕೊಂಡಿತ್ತು. ಅಂತಿಮವಾಗಿ 106 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಈ ಗುರಿಯನ್ನು ಅಫ್ಘಾನ್, ಕೇವಲ 10.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಚೇಸ್ ಮಾಡಿತ್ತು. ಲೀಗ್ ಹಂತದ ತಮ್ಮ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು, ಬಾಂಗ್ಲಾದೇಶವನ್ನು ಮಣಿಸಿತ್ತು.

ಬಲಾಬಲ

- Advertisement -

ಬ್ಯಾಟಿಂಗ್, ಬೌಲಿಂಗ್ ನಲ್ಲೂ ಅಪ್ಘಾನಿಸ್ತಾನ ತಂಡ ಬಲಿಷ್ಠವಾಗಿದೆ. ಆರಂಭಿಕರಾದ ಹಝ್ರತುಲ್ಲಾ ಝಝಾಯ್ ಮತ್ತು ರಹ್ಮಾನುಲ್ಲಾ ಗುರ್ಬಾಝ್, ಮೊದಲ ಪಂದ್ಯದಲ್ಲಿ 6 ಓವರ್ ಗಳಲ್ಲಿ 83 ರನ್ ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಇಬ್ರಾಹಿಂ ಝದ್ರಾನ್ ಮತ್ತು ನಜೀಬುಲ್ಲಾ ಝದ್ರಾನ್ ಅಬ್ಬರಿಸಿದ್ದರು. ಇನ್ನು ಬೌಲಿಂಗ್ ವಿಭಾಗಕ್ಕೆ ಬರುವುದಾದರೆ ವಿಶ್ವ ದರ್ಜೆಯ ತ್ರಿವಳಿ ಸ್ಪಿನ್ನರ್ ಗಳನ್ನು ಅಫ್ಘಾನ್ ಹೊಂದಿದೆ. ರಶೀದ್ ಖಾನ್, ಮುಜೀಬುರ್ ರಹ್ಮಾನ್ ಹಾಗೂ ನಾಯಕ ಮುಹಮ್ಮದ್ ನಬಿ, ರನ್ ನಿಯಂತ್ರಿಸುವುದರ ಜೊತೆಗೆ ವಿಕೆಟ್ ಪಡೆಯುತ್ತಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.

ಮತ್ತೊಂದೆಡೆ ಅನುಭವಿಗಳ ಪಡೆಯನ್ನೇ ಹೊಂದಿದ್ದರೂ ಶ್ರೀಲಂಕಾ ಇತ್ತೀಚಿನ ವರ್ಷಗಳಲ್ಲಿ ಟಿ20 ಆವೃತ್ತಿಯಲ್ಲಿ ನೀರಸ ಪ್ರದರ್ಶನ ನೀಡುತ್ತಿದೆ. ಆದರೆ ಬಾಂಗ್ಲಾದೇಶದ ವಿರುದ್ಧ 184 ರನ್ ಚೇಸ್ ಮಾಡಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಕುಸಾಲ್ ಮೆಂಡಿಸ್ ಮತ್ತು ನಾಯಕ ದಾಸುನ್ ಚನಕ ಈ ಪಂದ್ಯದಲ್ಲಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ್ದರು. ಆದರೆ ಪ್ರಮುಖ ಲೆಗ್-ಸ್ಪಿನ್ನರ್ ವನಿಂದು ಹಸರಂಗ ದುಬಾರಿಯಾಗುತ್ತಿರುವುದು ಲಂಕಾ ಪಾಲಿಗೆ ಕಳವಳಕಾರಿಯಾಗಿದೆ – ಏಷ್ಯಾ ಕಪ್ನ ಎರಡು ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದಿರುವ ಹಸರಂಗ, 60 ರನ್ ಗಳನ್ನು ಬಿಟ್ಟುಕೊಟ್ಟಿದ್ದರು.

ಪಂದ್ಯ ನಡೆಯುವ ಶಾರ್ಜಾ ಮೈದಾನವು ಸ್ಪಿನ್ನರ್ ಗಳಿಗೆ ನೆರವು ನೀಡುವ ನಿರೀಕ್ಷೆಯಿದೆ. ಹೀಗಾದಲ್ಲಿ ಅಫ್ಘಾನಿಸ್ತಾ ತಂಡವು ಪಂದ್ಯದಲ್ಲಿ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ.



Join Whatsapp