ಬೆಳಗಾವಿ: ರಾಜ್ಯದ ಹಲವಾರು ಮಠಗಳ ಸ್ವಾಮೀಜಿಗಳು ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ರೀತಿಯಲ್ಲಿ ಶೋಷಣೆ ಮಾಡುವ ಮೂಲಕ ಬಡ ಹೆಣ್ಣುಮಕ್ಕಳ ಜೀವನವನ್ನು ಹಾಳುಗೆಡವಿದ್ದಾರೆ. ಬಹಳ ಸ್ವಾಮೀಜಿಗಳು ಕೆಟ್ಟ ಚಾಳಿಯನ್ನು ಹೊಂದಿರುತ್ತಾರೆ ಎಂದು ಮಹಿಳೆಯೊಬ್ಬರ ಫೋನ್ ಸಂಭಾಷಣೆ ಸಖತ್ ವೈರಲ್ ಆಗಿದೆ.
ಫೋನ್ ಮೂಲಕ ಮಾತನಾಡುವ ಮಹಿಳೆಯನ್ನು ಬೆಳಗಾವಿ ಮೂಲದ ಸತ್ಯಕ್ಕ ಎಂದು ಗುರುತಿಸಲಾಗಿದ್ದು, ಆಕೆ ಗಂಗಾವತಿಯ ಮಹಿಳೆಯೊಂದಿಗೆ ಮಾತನಾಡುವ ಮೊಬೈಲ್ ಸಂಭಾಷಣ ವೈರಲ್ ಆಗಿದೆ. ಈ ವೇಳೆ ಆಕೆ ರಾಜ್ಯದಲ್ಲಿರುವ ಹಲವು ಮಠಗಳು, ಪೀಠ ಮತ್ತು ಸಾಮಾಜಿಕ ನಾಯಕರಾಗಿ ಗುರುತಿಸಲ್ಪಟ್ಟ ಸ್ವಾಮೀಜಿಗಳ ಹೆಸರನ್ನು ಪ್ರಸ್ತಾಪಿಸಿ ಅಚ್ಚರಿ ಮೂಡಿಸಿದ್ದಾರೆ.
ನಾನು ಹತ್ತು ವರ್ಷ ತಮಿಳುನಾಡಿನಲ್ಲಿ ವಾಸವಿದ್ದು, ಬಸವ ಸೇವಾ ಸಮಿತಿಯನ್ನು ರಚಿಸಿ ಸೇವೆ ಸಲ್ಲಿಸಿದ ಬಳಿಕ ಇದೀಗ ಅದನ್ನು ನಿಲ್ಲಿಸಿದ್ದೇನೆ. ಸ್ವಾಮೀಜಿಗಳ ಬಳಿ ಇದ್ದ ಹೆಣ್ಣುಮಕ್ಕಳಿಗೆ ಅವರ ನೈಜತೆ ಚೆನ್ನಾಗಿ ತಿಳಿದಿದೆ ಎಂದು ಸತ್ಯಕ್ಕ ಆರೋಪಿಸಿದ್ದಾರೆ.
ಮಧುರೈಯಲ್ಲಿ ಐದು ಎಕರೆ ಜಮೀನಿನಲ್ಲಿ ಪೀಠವನ್ನು ನಿರ್ಮಿಸಿ ಕೊಡುವ ಆಫರ್ ನೀಡಿದ್ದ ಸ್ವಾಮೀಜಿಯೊಬ್ಬರು ಅವರೊಂದಿಗೆ ಎಲ್ಲಾ ವಿಷಯದಲ್ಲಿ ಸಹಕರಿಸುವಂತೆ ಬೇಡಿಕೆಯನ್ನಿಟ್ಟಿದ್ದರು. ಆದರೆ ನಾನು ಅದನ್ನು ತಿರಸ್ಕರಿಸಿದ್ದೆ ಎಂದು ಹೇಳುತ್ತಿರುವುದು ಆಡಿಯೋದಲ್ಲಿ ರೆಕಾರ್ಡ್ ಆಗಿದೆ.
ಈ ಆಡಿಯೋ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದು ತಿಳಿದು ಬಂದಿದೆ.