ಮುರುಘಾ ಶ್ರೀ ಕೈದಿ ನಂ 2261: ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಧೀಶರು

Prasthutha|

ಚಿತ್ರದುರ್ಗ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಸಂಬಂಧಿಸಿದಂತೆ ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

- Advertisement -


ನ್ಯಾಯಾಂಗ ಬಂಧನಕ್ಕೆ ಒಳಪಟ್ಟು ಜೈಲುಪಾಲಾದ ಶಿವಮೂರ್ತಿ ಮುರುಘಾ ಶರಣರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 2261 ನೀಡಲಾಗಿದೆ.
ಈ ನಡುವೆ ಜೈಲಿಗೆ ಹೋದ ಕೆಲವೇ ಗಂಟೆಗಳಲ್ಲಿ ಮುರುಘಾ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡಿದ್ದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಸಂಬಂಧಿಸಿದಂತೆ ಪೋಕ್ಸೊ ಕೇಸ್ ದಾಖಲಾದ 6 ದಿನಗಳ ಬಳಿಕ ನಿನ್ನೆ ಮಧ್ಯರಾತ್ರಿ ಮುರುಘಾ ಮಠದಲ್ಲಿ ಶ್ರೀಗಳನ್ನು ಪೊಲೀಸರು ಬಂಧಿಸಿದ್ದರು.


ಬಿಳಿ ಬಟ್ಟೆ ಹೊದ್ದು ಪೊಲೀಸರ ಬಂಧನಕ್ಕೊಳಗಾದ ಶ್ರೀಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಅಲ್ಲಿಂದ ಮುಂಜಾನೆ 2.25ಕ್ಕೆ ಆಸ್ಪತ್ರೆಯಿಂದ ಹೊರಟ ಪೊಲೀಸರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಮುಂದೆ ಶ್ರೀಗಳನ್ನು ಹಾಜರುಪಡಿಸಿದರು.
ಶರಣರ ಪರ ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಿದರು. ಅರ್ಜಿ ತಿರಸ್ಕರಿಸಿದ ನ್ಯಾಯಾಧೀಶರು ಇಂದು ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಸೂಚಿಸಿ, ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

- Advertisement -


ಶ್ರೀಗಳ ಬಂಧನದ ಪ್ರಕ್ರಿಯೆ ಕುರಿತ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಕೆ.ಪರಶುರಾಮ್ ಅವರು, ಪೋಕ್ಸೋ ಪ್ರಕರಣದ ಸಂಬಂಧ ಆರೋಪಿ ಮುರುಘಾ ಶ್ರಿಗಳನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಒಬ್ಬ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದೇವೆ. ಉಳಿದವರನ್ನು ಕೂಡ ವಿಚಾರಣೆ ನಡೆಸುತ್ತೇವೆ. ಸಾಕ್ಷ್ಯಾಧಾರ ಕಲೆ ಹಾಕಲು ವಿಳಂಬ ಆಯಿತು. ಆದ್ದರಿಂದ ಬಂಧನವೂ ವಿಳಂಬವಾಯಿತು. ಮುರುಘಾ ಶ್ರೀಗಳು ಸದ್ಯಕ್ಕೆ ಇಲ್ಲೇ ಇರುತ್ತಾರೆ. ಶ್ರೀಗಳ ಆರೋಗ್ಯ ಕುರಿತ ವರದಿಯನ್ನು ವೈದ್ಯರು ನ್ಯಾಯಲಯದ ಮುಂದೆ ನೀಡುತ್ತಾರೆ. ಅದನ್ನು ನೋಡಿ ನ್ಯಾಯಾಧೀಶರು ವಿಚಾರಣೆ ನಡೆಸುತ್ತಾರೆ ಎಂದು ತಿಳಿಸಿದ್ದಾರೆ.


ಶ್ರೀಗಳ ಪರವಾಗಿ ನ್ಯಾಯಾಲಯಕ್ಕೆ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಬಂಧನವಾಗಿದ್ದರಿಂದ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಈ ನಿಟ್ಟಿನಲ್ಲಿ ರೆಗ್ಯುಲರ್ ಬೇಲ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇವತ್ತು ತನಿಖಾಧಿಕಾರಿಯಿಂದ ಪೊಲೀಸ್ ಕಸ್ಟಡಿಗೆ ಕೇಳಲು ಸಿದ್ಧತೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಶ್ರೀಗಳ ವಿಸ್ತೃತ ವಿಚಾರಣೆ ಅವಶ್ಯಕತೆಯಿದೆ.

ಪೋಕ್ಸೋ ಪ್ರಕರಣದ ಹಿನ್ನೆಲೆಯಲ್ಲಿ ಸ್ಥಳ ಮಹಜರು ಮಾಡಬೇಕಾದ ಅಗತ್ಯವಿದೆ. ಅಲ್ಲದೆ ಆರೋಪಿಯ ಹೇಳಿಕೆ ದಾಖಲಿಸಬೇಕು. ಪೋಕ್ಸೊ ಕೇಸ್ ನಡಿ ಆರೋಪಿಯ ಕೃತ್ಯದ ಸ್ಥಳ ಸೇರಿದಂತೆ ಕೆಲವು ಸ್ಥಳಗಳ ಮಹಜರು ಅವಶ್ಯಕತೆ ಇದೆ. ಸಾಕ್ಷಿಗಳನ್ನು ಸಂಗ್ರಹಿಸಬೇಕಿದೆ. ಹೀಗಾಗಿ ಶ್ರೀಗಳನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು ಎಂದು ಪೊಲೀಸರು ಕೋರ್ಟ್ಗೆ ಜಾಮೀನು ನೀಡಿದಂತೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಮುರುಘಾಮಠದ ಶ್ರೀಗಳ ಬಂಧನದ ಕುರಿತಂತೆ ಪ್ರತಿಕ್ರಿಯೆ ಮಠದ ಪರ ವಕೀಲ ಉಮೇಶ್, ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಿಲ್ಲ. ಕಾನೂನಿಗೆ ಗೌರವ ನೀಡಲೆಂದು ಸ್ವಾಮೀಜಿಯೇ ಪೊಲೀಸರಿಗೆ ಶರಣಾಗಿದ್ದಾರೆ. ಮಹಿಳಾ ವಾರ್ಡನ್ ಹೇಳಿಕೆಯ ಆಧಾರದ ಮೇಲೆ ಬಂಧನ ಆಗಿಲ್ಲ. ಬೇರೆ ಪ್ರಕರಣದ ವಿಚಾರವಾಗಿ ಮಹಿಳಾ ವಾರ್ಡನ್ ವಿಚಾರಣೆ ನಡೆದಿದೆ.
ಶ್ರೀಗಳಿಗೆ ಜಾಮೀನು ಕೋರಿ ಇಂದು ಕೋರ್ಟ್ಗೆ ಮತ್ತೆ ಅರ್ಜಿ ಸಲ್ಲಿಸುತ್ತೇವೆ. ನಾವು ನಿನ್ನೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ರದ್ದಾಗಿದೆ. ಇಂದು ಮತ್ತೊಮ್ಮೆ ಜಾಮೀನಿಗೆ ಅರ್ಜಿ ಸಲ್ಲಿಸುತ್ತೇವೆ. ಮುರುಘಾಶ್ರೀಗಳಿಗೆ ಗೆದ್ದು ಬರುವ ವಿಶ್ವಾಸ ಇದೆ ಎಂದು ಅವರು ಹೇಳಿದರು.




Join Whatsapp