ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ

Prasthutha|

ಬೆಂಗಳೂರು: ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಈ ವಿಷಯವನ್ನು ಅವರು ಪ್ರಕಟಿಸಿದರು. ಕಾಂಗ್ರೆಸ್ ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸುವಂತೆ ಕೇಳಿದ್ದೇನೆ ಎಂದು ಹೇಳಿದರು.

ನಾನು ನಾಯಕರನ್ನು ಭೇಟಿ ಮಾಡಿ ನನ್ನ ಸ್ಪಷ್ಟ ನಿರ್ಧಾರವನ್ನು ತಿಳಿಸಿದ್ದೇನೆ. ನಾನು ಅತ್ಯಂತ ಕ್ರಿಯಾಶೀಲವಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ನಾನು ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧೆ ಮಾಡದಂತೆ ತಪ್ಪಿಸಲಾಗಿದೆ. 2019ರಲ್ಲಿ ಹಾಲಿ ಸಂಸದನಾಗಿದ್ದರೂ ಸ್ಪರ್ಧೆಗೆ ನನಗೆ ಅವಕಾಶ ನೀಡಲಿಲ್ಲ ಎಂದು ಎಸ್. ಪಿ. ಮುದ್ದಹನುಮೇಗೌಡ ಆರೋಪಿಸಿದರು.

- Advertisement -

ರಾಜೀನಾಮೆ ಪತ್ರವನ್ನು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ತ್ಯಜಿಸುವ ಹಾಗೂ 2023ರ ವಿಧಾನ ಸಭಾ ಚುನಾವಣೆಯಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ತಿಳಿಸಿದರು.

‘ಪಕ್ಷ ತೊರೆಯುವ ನಿರ್ಧಾರ ಮಾಡಬೇಡ ಎಂದು ಸ್ವತಃ ಸಿದ್ದರಾಮಯ್ಯ ಕಿವಿ ಮಾತು ಹೇಳಿದ್ದಾರೆ. ಆದರೆ ಪಕ್ಷ ತಮ್ಮನ್ನು ನಿರ್ಲಕ್ಷ್ಯ ಮಾಡಿದೆ. ಕಳೆದ ‘ರಾಜ್ಯಸಭಾ ಚುನಾವಣೆ ವೇಳೆ ರಣದೀಪ್ ಸಿಂಗ್ ಸುರ್ಜೇವಾಲ ದೂರವಾಣಿ ಕರೆ ಮಾಡಿ ಪಕ್ಷದಲ್ಲೇ ಇರುವಂತೆ ಸಲಹೆ ಮಾಡಿದ್ದರು. ಆ ನಂತರ ತಮ್ಮ ಬೇಡಿಕೆಗಳ ಕುರಿತು ಏನನ್ನೂ ಮಾತನಾಡಿಲ್ಲ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಲು ಬಯಸುವುದಿಲ್ಲ. ಪಕ್ಷವನ್ನು ಬ್ಲಾಕ್ ಮೇಲ್ ಮಾಡಲು ಹೀಗೆ ಮಾಡುತ್ತಿಲ್ಲ ಎಂದರು.

ಕಳೆದ 2019ರಲ್ಲಿ ಸಂಸದನಾಗಿದ್ದರೂ ಸ್ಪರ್ಧಿಸಲು ಅವಕಾಶ ಕೊಡಲಿಲ್ಲ. ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಪ್ಪಿಸಲಾಗಿದೆ. ನಾನು ಅತ್ಯಂತ ಕ್ರಿಯಾಶೀಲನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಪಕ್ಷಕ್ಕೆ ನನ್ನದೇ ಆದ ಅಳಿಲು ಸೇವೆ ಸಲ್ಲಿಸಿದ್ದೇನೆ. ಕಾಂಗ್ರೆಸ್  ಅಧಿಕಾರಕ್ಕೆ ಬರಲು ನನ್ನ ಸೇವೆಯೂ ಇದೆ. ತಾವು ಸಕ್ರಿಯ ರಾಜಕೀಯದಲ್ಲಿದ್ದು, ಅನ್ಯಾಯ ಸಹಿಸಿಕೊಂಡು ಮುಂದುವರೆಯಲು ಸಾಧ್ಯವಿಲ್ಲ ಎಂದರು.

2014ರ ಲೋಕಸಭೆಯಲ್ಲಿ ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಸಂಸದರಾಗಿ ಚುನಾಯಿತರಾಗಿದ್ದ ಮುದ್ದಹನುಮೇಗೌಡರಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರನ್ನು ಕಣಕ್ಕಿಳಿಸುವ ಕಾರಣ ನೀಡಿ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ರಾಜ್ಯಸಭೆಗೆ ಆರಿಸಿ ಕಳುಹಿಸುವುದಾಗಿ ಭರವಸೆ ನೀಡಿತ್ತು. ಆದರೆ ತಮ್ಮ ಭರವಸೆಯನ್ನು ಕಾಂಗ್ರೆಸ್ ಈಡೇರಿಸಿಲ್ಲ.




Join Whatsapp