ನವದೆಹಲಿ: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರ ಜಾಮೀನು ವಿಚಾರಣೆಯನ್ನು ಸರ್ಕಾರಿ ವಕೀಲರು ಪದೇಪದೇ ಕೋರಿದ ಮೇರೆಗೆ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ನೇತೃತ್ವದ ತ್ರಿಸದಸ್ಯ ಪೀಠ ನಾಳೆಗೆ ಮುಂದೂಡಿದೆ.
ಆದರೆ ವಿಚಾರಣೆಯುದ್ದಕ್ಕೂ ಮುಖ್ಯ ನ್ಯಾಯಮೂರ್ತಿ U.U. ಲಲಿತ್ ಅವರು ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಗುಜರಾತ್ ಪೊಲೀಸರು ತಮ್ಮ FIR ನಲ್ಲಿ ಸುಪ್ರೀಂಕೋರ್ಟು ಜೂನ್ 25 ರಂದು ಜಾಕಿಯ ಜಾಫ್ರಿ ಪ್ರಕರಣದಲ್ಲಿ ನೀಡಿದ ಆದೇಶದಲ್ಲಿ ಮಾಡಿದ ಟಿಪ್ಪಣಿಗಳನ್ನು ಬಿಟ್ಟು ಬೇರೆ ಯಾವ ಅಸಲಿ ಕೇಸುಗಳನ್ನು ಹೂಡಿಲ್ಲ. ಅಲ್ಲದೆ ಆರೋಪವು ಕೂಡ ಕೊಲೆ, ಸುಲಿಗೆಯಂತಹ ಅಥವಾ UAPA ಅಂಥಾ ಅಪರಾಧಗಳೂ ಅಲ್ಲ. ಕೇವಲ IPC ಸೆಕ್ಷನ್ ಅಡಿ ಬರುವ ಫೋರ್ಜರಿ ಆರೋಪ. ಅದಕ್ಕೆ ಇಷ್ಟು ಸುದೀರ್ಘ ಕಾಲ ಮಹಿಳೆಯೊಬ್ಬರನ್ನು ಬಂಧನದಲ್ಲಿಡುವ ಅಗತ್ಯವೇನಿದೆ? ಇಷ್ಟಕ್ಕೂ ಸುಪ್ರೀಂ ಕೋರ್ಟು ಹೇಳಿರುವುದನ್ನು ಬಿಟ್ಟು ಕಳೆದ ಎರಡು ತಿಂಗಳಲ್ಲಿ ಪೋಲೀಸರು ತನಿಖೆಯಲ್ಲಿ ಪತ್ತೆ ಹಚ್ಚಿರುವ ಒಂದು ಹೊಸ ವಿಷಯವನ್ನಾದರೂ ಕೋರ್ಟಿಗೆ ತಿಳಿಸಿ? ಎಂದು ನ್ಯಾಯಮೂರ್ತಿಗಳು ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಅಲ್ಲದೆ ಗುಜರಾತ್ ಹೈಕೋರ್ಟು ಸಹ ಆಗಸ್ಟ್ 3 ರಂದು ತನ್ನ ಮುಂದೆ ಬಂದ ಪ್ರಕರಣದ ಜಾಮೀನು ಅರ್ಜಿಯನ್ನು ಆರು ವಾರಗಳ ಕಾಲ (ಸೆಪ್ಟೆಂಬರ್ 9) ರ ವರೆಗೆ ಮುಂದೂಡಿದ ಬಗ್ಗೆಯೂ ಸುಪ್ರೀಂ ಕೋರ್ಟು ಆಕ್ಷೇಪ ವ್ಯಕ್ತಪಡಿಸಿತು. ಈ ಹಿಂದೆ ಮಹಿಳೆಯೊಬ್ಬರು ಆರೋಪಿಯಾಗಿರುವ ಯಾವ ಫೋರ್ಜರಿ ಪ್ರಕರಣದ ಜಾಮೀನು ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಲಾಗಿದೆ ತಿಳಿಸಿ ಎಂದು ಸರ್ಕಾರಿ ವಕೀಲರಿಗೆ ಸವಾಲು ಹಾಕಿದರು.
ಸರ್ಕಾರಿ ವಕೀಲರಂತೂ ಉದ್ದಕ್ಕೂ ತೀಸ್ತಾ ಸಾಮಾನ್ಯ ಮಹಿಳೆಯಲ್ಲ. ಮಾಡಿರುವುದು ಸಾಮಾನ್ಯ ಅಪರಾಧವಲ್ಲ. ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ಹಾಕಿದ್ದರೂ ಕಾಯದೆ ಸುಪ್ರೀಂ ಗೆ ಬಂದಿರುವುದು ಉಚಿತವಲ್ಲ. ಸುಪ್ರೀಂ ಕೂಡ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಕೂಡದು. ಹಾಗೆ ಮಾಡಿದರೆ ಕೋರ್ಟಿನ ಮುಂದಿರುವ ಇತರ ಸಾವಿರಾರು ಅಹವಾಲುದಾರರಿಗೆ ತಾರತಮ್ಯ ಮಾಡಿದಂತಾಗುತ್ತದೆ ಎಂದು ವಾದಿಸುತ್ತಲೇ ಹೋದರು. ಸುಪ್ರೀಂ ಕೋರ್ಟು ಕೇಳಿದ ಯಾವ ಮೌಲಿಕ ಪ್ರಶ್ನೆಗಳಿಗೂ ಅವರ ಬಳಿ ಉತ್ತರವಿರಲಿಲ್ಲ.
ಕೋರ್ಟು ಈ ಎಲ್ಲಾ ವಾದಗಳನ್ನು ತಿರಸ್ಕರಿಸಿ ಒಂದು ಹಂತದಲ್ಲಿ ಮಧ್ಯಂತರ ಜಾಮೀನು ಕೊಡಲು ಮುಂದಾದಾಗ ತಾನು ಕೇಸಿನ ಮೆರಿಟ್ ಮೇಲೆ ನಾಳೆ ವಾದ ಮಾಡುವುದಾಗಿ ಹೇಳಿ ಪ್ರಕರಣವನ್ನು ನಾಳೆಗೆ ಮುಂದೂಡಲು ಪದೇಪದೇ ಮನವಿ ಮಾಡಿದರು.
ಹೀಗಾಗಿ ತೀಸ್ತಾ ಜಾಮೀನು ಅರ್ಜಿ ವಿಚಾರಣೆಯು ನಾಳೆ ಮಧ್ಯಾಹ್ನ 2 ಕ್ಕೆ ಮುಂದುವರೆಯಲಿದೆ.