ರಿಯಾದ್: ಸೌದಿ ಅರೇಬಿಯಾದ ಖಮಿಸ್ ಮುಶೈತ್ ಗವರ್ನರೇಟ್ ವ್ಯಾಪ್ತಿಯಲ್ಲಿರುವ ಅನಾಥಾಶ್ರಮದಲ್ಲಿ ಭದ್ರತಾ ಅಧಿಕಾರಿಗಳು ಮಹಿಳಾ ಪ್ರತಿಭಟನಕಾರರ ಮೇಲೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹತ್ತಾರು ಸೌದಿ ಪೊಲೀಸರು ಮತ್ತು ಇತರರು ಸೌದಿ ಅರೇಬಿಯಾದ ಸಾಂಪ್ರದಾಯಿಕ ಉಡುಪಿನಲ್ಲಿ ಮನೆಯೊಳಗೆ ಮಹಿಳೆಯರನ್ನು ಮರದ ಬೆತ್ತ ಮತ್ತು ಬೆಲ್ಟ್ ಹಿಡಿದು ಬೆನ್ನಟ್ಟುವುದು ವೀಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೆ ಮಹಿಳೆಯೊಬ್ಬಳು ಕಿರುಚುತ್ತಿದ್ದಂತೆ ಪುರುಷನೊಬ್ಬ ಆಕೆಯ ಕೂದಲು ಹಿಡಿದು ಎಳೆದುಕೊಂಡು ಹೋಗುತ್ತಿರುವುದು, ಮತ್ತೊಬ್ಬ ತನ್ನ ಬೆಲ್ಟ್’ನಿಂದ ಹೊಡೆಯುತ್ತಿರುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ.
ಅನಾಥಾಶ್ರಮಕ್ಕೆ ನುಗ್ಗಿದ ಸೌದಿಯ ಭದ್ರತಾ ಅಧಿಕಾರಿಗಳು ಹಲವಾರು ಬಾಲಕಿಯರನ್ನು ಬಂಧಿಸಿರುವುದು ಸೋರಿಕೆಯಾದ ಫೋಟೋದಿಂದ ಬಹಿರಂಗವಾಗಿದೆ. ಆದರೆ ಮಹಿಳೆಯರ ಬಂಧನಕ್ಕೆ ನಿಖರ ಕಾರಣ ಅಥವಾ ಈ ಸ್ಥಳವನ್ನು ಬಹಿರಂಗಪಡಿಸಿಲ್ಲ. ಘಟನೆಯಲ್ಲಿ ಒಟ್ಟು ಎಷ್ಟು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಸೌದಿ ಅಧಿಕಾರಿಗಳು ಇನ್ನೂ ಸ್ಪಷ್ಟಪಡಿಸಿಲ್ಲ ಮತ್ತು ಈ ಕುರಿತು ಮಾಹಿತಿಗಳನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಾಗಿದೆ.
ಖಮಿಸ್ ಮುಶೈತ್ ಗವರ್ನರೇಟ್ ವ್ಯಾಪ್ತಿಯಲ್ಲಿ ಘಟನೆಯ ಕುರಿತ ವೀಡಿಯೋ ಮತ್ತು ಫೋಟೋ ಸಾಮಾಜಿಕ ವೈರಲ್ ಆಗುತ್ತಿದ್ದಂತೆ ತನಿಖೆ ನಡೆಸಲು ಸಮಿತಿಯನ್ನು ರಚಿಸುವಂತೆ ಅಸಿರ್ ರಾಜಕುಮಾರ್ ತುರ್ಕಿ ಬಿನ್ ತಲಾಲ್ ಬಿಬ್ ಅಬ್ದುಲ್ ಅಝೀಝ್ ಬುಧವಾರ ಆದೇಶ ಹೊರಡಿಸಿದ್ದಾರೆ.