ನವದೆಹಲಿ: ಹತ್ರಾಸ್ ಪ್ರಕರಣದಲ್ಲಿ ಬಂಧಿತರಾಗಿರುವ ವಿದ್ಯಾರ್ಥಿ ನಾಯಕ ಅತೀಕುರ್ರಹ್ಮಾನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅತೀಕುರ್ರಹ್ಮಾನ್ ಅವರ ಎಡ ಕೈ ಅಲುಗಾಡಿಸಲಾಗದ ಸ್ಥಿತಿ ತಲುಪಿದ್ದು, ದೇಹವು ಸ್ಪರ್ಶ ಜ್ಞಾನ ಕಳೆದುಕೊಂಡಿದೆ ಎಂದು ತಿಳಿದುಬಂದಿದೆ.
ಚಿಕ್ಕಂದಿನಿಂದಲೂ ಹೃದಯ ಸಂಬಂಧಿ ರೋಗಿಯಾಗಿರುವ ಅತೀಕುರ್ರಹ್ಮಾನ್ 2021ರ ಅಕ್ಟೋಬರ್ ನಲ್ಲಿ ಈ ಸಂಬಂಧ ಎಐಐಎಂಎಸ್ನಲ್ಲಿ ಅಯೋರ್ಟಿಕ್ ರೆಗುರ್ಜಿಟೇಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವುದು ಇದು ಎರಡನೆಯ ಬಾರಿ. ಆದ್ದರಿಂದ ಅತೀಕ್ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಅವರು ಕಳೆದ 11 ತಿಂಗಳಿನಿಂದ ಈ ಪ್ರಕರಣದಲ್ಲಿ ಸಿದ್ದೀಕ್ ಕಾಪ್ಪನ್ ಅವರೊಂದಿಗೆ ಮಥುರಾ ಜೈಲಿನಲ್ಲಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಅತೀಕುರ್ರಹ್ಮಾನ್ ಅವರನ್ನು ಕಳೆದ ವರ್ಷ ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಪಡುವಂತೆ ಕಟ್ಟುನಿಟ್ಟಾಗಿ ಸಲಹೆ ನೀಡಿದ್ದರು. ಆದರೆ ಶಸ್ತ್ರಚಿಕಿತ್ಸೆಗೆ ಮೊದಲು ಅವರನ್ನು ಯುಪಿ ಪೊಲೀಸರು ಬಂಧಿಸಿದ್ದರು.
ಯುಪಿ ಮೂಲದ ಮುಝಫರ್ ನಗರದ ನಿವಾಸಿಯಾದ ಅತೀಕುರ್ರಹ್ಮಾನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಯ ರಾಷ್ಟ್ರೀಯ ಕೋಶಾಧಿಕಾರಿಯಾಗಿದ್ದಾರೆ.
ಅತೀಕುರ್ರಹ್ಮಾನ್ ಅವರನ್ನು ಸುಳ್ಳು ಪ್ರಕರಣದಲ್ಲಿ 2020ರ ಅಕ್ಟೋಬರ್ 5ರಂದು ಬಂಧಿಸಲಾಗಿದೆ. ಉತ್ತರ ಪ್ರದೇಶದ ಜೈಲಿನಲ್ಲಿ ಎರಡು ವರುಷಗಳಿಂದ ಸರಿಯಾದ ವಿಚಾರಣೆಯೇ ಇಲ್ಲದೆ ಅವರು ಇದ್ದಾರೆ.
ಅವರ ಜೀವ ಉಳಿಸುವ ಚಿಕಿತ್ಸೆ ಸಿಗುವಂತೆ ಮತ್ತು ಶೀಘ್ರ ಜಾಮೀನು ನೀಡುವಂತೆ ಒತ್ತಾಯಿಸಿ, ಕುಟುಂಬದ ರಕ್ಷಣೆ ದೊರೆಯುವಂತೆ ಮಾಡಲು ಒತ್ತಾಯಿಸಿ ಟ್ವಿಟರ್ ಪ್ರಚಾರವೊಂದನ್ನು ನಡೆಸಲಾಗುತ್ತಿದೆ. # Save AtikurLife# ReleaseAtikurRahman ಈ ಟ್ವಿಟರ್ ಯಾನದಲ್ಲಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರೂ ಭಾಗವಹಿಸಿ ಅತೀಕುರ್ರಹ್ಮಾನ್ ಜೀವ ರಕ್ಷಣೆಗೆ ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಅವರ ಕುಟುಂಬದವರು, ಸ್ನೇಹಿತರು ಮನವಿ ಮಾಡಿದ್ದಾರೆ.