ಕೋಲ್ಕತಾ: ಕಲ್ಲಿದ್ದಲು ಕಳ್ಳತನ ಹಗರಣದ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ಶುಕ್ರವಾರ ಬೆಳಿಗ್ಗೆ ಕೋಲ್ಕತ್ತಾದಲ್ಲಿ ಇಡಿ ಮುಂದೆ ಹಾಜರಾಗುವಂತೆ ಅಭಿಷೇಕ್ ಅವರಿಗೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಬಹುಕೋಟಿ ಕಲ್ಲಿದ್ದಲು ಹಗರಣ ನಡೆದಿದೆ ಎಂದು ಆರೋಪಿಸಿ ಸಿಬಿಐ ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್ಐಆರ್) ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002 ರ ಅಡಿಯಲ್ಲಿ ಇಡಿ ಪ್ರಕರಣ ದಾಖಲಿಸಿದೆ.
“ನಮ್ಮ ಅಧಿಕಾರಿಗಳ ಮುಂದೆ ಹಾಜರಾಗುವಂತೆ ನಾವು ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಮನ್ಸ್ ನೀಡಿದ್ದೇವೆ. ಅವರನ್ನು ವಿಚಾರಣೆಗೆ ಒಳಪಡಿಸಲು ನವದೆಹಲಿಯಿಂದ ನಮ್ಮ ಅಧಿಕಾರಿಗಳು ಬರುತ್ತಾರೆ” ಎಂದು ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿ ತಿಳಿಸಿದರು.