ಹಿಜಾಬ್ ಗೆ ನಿರ್ಬಂಧ: ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್

Prasthutha|

ನವದೆಹಲಿ: ಹಿಜಾಬ್ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಕರ್ನಾಟಕ ಸರ್ಕಾರಕ್ಕೆ ಸೋಮವಾರ ನೋಟಿಸ್ ಜಾರಿ ಮಾಡಿದೆ.

- Advertisement -

ವಾದಗಳ ಮಂಡನೆಗಾಗಿ ಪ್ರಕರಣವನ್ನು ಮುಂದಿನ ಸೋಮವಾರಕ್ಕೆ ನಿಗದಿಪಡಿಸಿ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ವಿಚಾರಣೆಯನ್ನು ಮುಂದೂಡುವಂತೆ ಸರ್ಕಾರಿ ವಕೀಲ ತುಷಾರ್ ಮೆಹ್ತಾ ಅವರ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಮತ್ತು ಸುಧಾಂಶು ಧುಲಿಯಾ ಅವರ ಪೀಠ, ಸೆಪ್ಟಂಬರ್ 5ಕ್ಕೆ ವಿಚಾರಣೆ ನಿಗದಿಪಡಿಸಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು.

- Advertisement -

ಮುಂದೂಡಿಕೆಯ ಕೋರಿಕೆಯ ಹಿಂದಿನ ಉದ್ದೇಶವನ್ನು ಅನುಮಾನಿಸಿದ ಪೀಠವು, “ನಾವು ಫೋರಂ ಶಾಪಿಂಗ್‌ ಗೆ (ಅನುಕೂಲಕರ ನ್ಯಾಯಾಲಯದ ಮುಂದೆ ಪಕ್ಷಕಾರರು ಎಡತಾಕುವ ಪ್ರಕ್ರಿಯೆ] ಅನುಮತಿಸುವುದಿಲ್ಲ. ನೀವು ಇಷ್ಟು ದಿನ ಪ್ರಕರಣವನ್ನು ಶೀಘ್ರ ಪಟ್ಟಿ ಮಾಡಲು ಕೋರುತ್ತಿದ್ದಿರಿ, ಈಗ ಮುಂದೂಡಲು ಕೋರುತ್ತಿದ್ದೀರಿ. ನಾವು ಇದನ್ನು ಅನುಮತಿಸುವುದಿಲ್ಲ,” ಎಂದು ನ್ಯಾಯಾಲಯ ಹೇಳಿತು. ಈ ಹಿಂದೆ ಪ್ರಕರಣವನ್ನು ಶೀಘ್ರ ಪಟ್ಟಿ ಮಾಡುವಂತೆ ಆರು ಬಾರಿ ಪಕ್ಷಕಾರರ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದರು.

ಹಿಜಾಬ್‌ ಧಾರಣೆಯು ಇಸ್ಲಾಂನಲ್ಲಿ ಅಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಅದಕ್ಕೆ ಆತ್ಮಸಾಕ್ಷಿ ಸ್ವಾತಂತ್ರ್ಯದ ರಕ್ಷೆಯೂ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿತ್ತು.

ಶಾಲಾ ಸಮವಸ್ತ್ರ ಸೂಚಿಸುವುದರಿಂದ ಅಭಿವ್ಯಕ್ತಿ ಮತ್ತು ಖಾಸಗಿ ಸ್ವಾತಂತ್ರ್ಯ ಉಲ್ಲಂಘನೆಯಾಗುವುದಿಲ್ಲ. ಅದು ಸಮಂಜಸ ನಿರ್ಬಂಧವಾಗಿದ್ದು, ಅದಕ್ಕೆ ಸಾಂವಿಧಾನಿಕ ಅನುಮತಿ ಇದೆ. ಆದೇಶ ಹೊರಡಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಹೀಗಾಗಿ, ಸರ್ಕಾರದ ಆದೇಶ ಸಿಂಧುವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ನ್ಯಾಯಮೂರ್ತಿ ಕೆ ಎಂ ಖಾಜಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿತ್ತು.

ಹೈಕೋರ್ಟ್‌ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿರುವ ಅರ್ಜಿದಾರರು, ಸಂವಿಧಾನದ 21ನೇ ವಿಧಿಯಡಿ ದೊರೆತಿರುವ ಖಾಸಗಿತನದ ಹಕ್ಕಿನ ವ್ಯಾಪ್ತಿಗೆ ಹಿಜಾಬ್‌ ಧಾರಣೆ ಹಕ್ಕು ಬರುತ್ತದೆ ಎಂಬದನ್ನು ಪರಿಗಣಿಸುವಲ್ಲಿಯೂ ಕರ್ನಾಟಕ ಹೈಕೋರ್ಟ್‌ ಎಡವಿದೆ ಎಂದಿದ್ದಾರೆ.

ಕರ್ನಾಟಕ ಶಿಕ್ಷಣ ಕಾಯಿದೆ 1983ರ ಮತ್ತು ಅದರ ಅಡಿ ರೂಪಿಸಲಾಗಿರುವ ನಿಯಮಗಳ ಅಡಿ ಕಡ್ಡಾಯವಾಗಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು ಎಂಬ ನಿಯಮವಿಲ್ಲ. “ಶಿಕ್ಷಣ ಕಾಯಿದೆಯು ವಿದ್ಯಾರ್ಥಿಗಳಿಗೆ ಬದಲಾಗಿ ಸಂಸ್ಥೆಗಳಲ್ಲಿ ಸುಧಾರಣೆ ತರುವ ಉದ್ದೇಶ ಹೊಂದಿದೆ. ಕಾಯಿದೆ ಸೆಕ್ಷನ್‌ 3 ಮತ್ತು 7ರಲ್ಲಿ ಶಿಕ್ಷಣ, ಪಠ್ಯಕ್ರಮ, ಭಾಷಾ ಮಾಧ್ಯಮ ಇತ್ಯಾದಿ ಸುಧಾರಣೆಗೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಕಲ್ಪಿಸಲಾಗಿದೆ. ಅದಾಗ್ಯೂ, ಈ ಯಾವುದೇ ನಿಬಂಧನೆಗಳು ವಿದ್ಯಾರ್ಥಿಗಳಿಗೆ ಸಮವಸ್ತ್ರ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡಿಲ್ಲ” ಎಂದು ಮನವಿಯಲ್ಲಿ ಹೇಳಲಾಗಿದೆ.



Join Whatsapp