ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರರಾ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾರವಾಗಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಹಿಂದೆ ಭ್ರಷ್ಟಾಚಾರ ಆಗಿತ್ತು ಎಂದು ಹೇಳುತ್ತಾರೆ. ಹಾಗಾದರೆ ಇಷ್ಟು ದಿನ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಇದ್ರಾ? ಎಂದು ಪ್ರಶ್ನಿಸಿದರು
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಒಂದು ವರ್ಷದಿಂದ ಸರ್ಕಾರದ ಮೇಲೆ ಆರೋಪ ಮಾಡುತ್ತಲೇ ಇದ್ದಾರೆ.
ಇಷ್ಟು ದಿನ ನಿಖರವಾಗಿ ಯಾವೊಬ್ಬ ಸಚಿವರ ಮೇಲೆ ಆರೋಪ ಮಾಡಿರಲಿಲ್ಲ.
ಈಗ ಸಚಿವ ಮುನಿರತ್ನ ಅವರ ವಿರುದ್ಧ ಆರೋಪ ಮಾಡಿದ್ದಾರೆ. ಸಚಿವ ಮುನಿರತ್ನ ಅವರು ಕೆಂಪಣ್ಣ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದಿದ್ದಾರೆ. ಅವರೇ ಮುಂದಿನ ಹೋರಾಟ ಮಾಡ್ತಾರೆ ಎಂದರು.
ಸುಮ್ಮನೆ ರಾಜಕೀಯಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಕೆಂಪಣ್ಣ ನೀಡಿದ್ದ ಸಲಹೆಯಂತೆ ಕೆಲಸ ಮಾಡಿಸುತ್ತಿದ್ದೇವೆ. ಅವರು ನನ್ನ ಭೇಟಿ ಮಾಡಿದ್ದರು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಇದು ಭ್ರಷ್ಟ ಸರ್ಕಾರ, ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ ಹಿಡಿದು ಸಚಿವರೆಲ್ಲರೂ ಭ್ರಷ್ಟರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಅಲ್ಲದೆ ಭ್ರಷ್ಟಾಚಾರ ಎಲ್ಲಾ ಕಾಲದಲ್ಲೂ ಇತ್ತು.
ಆದರೆ ಬಿಜೆಪಿ ಸರ್ಕಾರದಲ್ಲಿ ಶರವೇಗದಲ್ಲಿ ಕಮಿಷನ್ ಹೆಚ್ಚುತ್ತಿದೆ. ಇದನ್ನ ರಾಜ್ಯ ಗುತ್ತಿಗೆದಾರರು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು.