ಬೆಂಗಳೂರು: 40% ಕಮಿಷನ್ ಆರೋಪದ ಬಗ್ಗೆ ನಿರ್ದಿಷ್ಟವಾದ ಸಾಕ್ಷ್ಯಾಧಾರಗಳಿಲ್ಲದೇ, ಕೇವಲ ರಾಜಕೀಯ ಪ್ರೇರಿತ ಬೇಜವಾಬ್ದಾರಿ ಹೇಳಿಕೆಯಾಗಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
40% ಕಮಿಷನ್ ಆರೋಪದ ಬಗ್ಗೆ ತನಿಖೆ ನಡೆಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನಿರ್ದಿಷ್ಟ ದೂರು ಇದ್ದು, ಆರೋಪದ ಬಗ್ಗೆ ನಿರ್ದಿಷ್ಟವಾದ ಸಾಕ್ಷ್ಯಾಧಾರಗಳಿರಬೇಕು. ಇವುಗಳಿಲ್ಲದೇ ಕೇವಲ ಪತ್ರಿಕಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೇವಲ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.
ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿ :
ಪ್ರಕರಣಗಳನ್ನು ತನಿಖೆ ಮಾಡಲೆಂದೇ ಸರ್ವಸ್ವತಂತ್ರವಾದ ಲೋಕಾಯುಕ್ತ ಇದೆ. ಇತ್ತೀಚಿನ ಹೈಕೋರ್ಟ್ನ ಆದೇಶದಂತೆ ಎಸಿಬಿಯ ಸಂಪೂರ್ಣ ಅಧಿಕಾರವನ್ನು ಲೋಕಾಯುಕ್ತಕ್ಕೇ ನೀಡಲಾಗಿದೆ. ಎಲ್ಲರಿಗೂ ಯಾರ ಮೇಲಾದರೂ ದೂರು ನೀಡುವ ಅಧಿಕಾರವಿದೆ. ದೂರು ಸಲ್ಲಿಸುವ ಅವಕಾಶವಿದೆ. ರಾಜಕೀಯ ಪ್ರೇರಿತವಾಗಿ ಹೇಳಿಕೆಗಳನ್ನು ನೀಡಲಾಗುತ್ತಿದೆ. ಕೆಂಪಣ್ಣ ಅವರ ಗುತ್ತಿಗೆದಾರರ ಸಂಘ ಮಾತ್ರವಲ್ಲ. ಬಿಬಿಎಂಪಿ, ಲೋಕೋಪಯೋಗಿ ಸೇರಿದ ಕೆಲಸ ನಿರ್ವಹಿಸುವ ಹಲವಾರು ಸಂಘಗಳ ಗುತ್ತಿಗೆದಾರರಿದ್ದಾರೆ. ಆದರೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ನಂತರ ಮಾಧ್ಯಮ ಹೇಳಿಕೆಗಳನ್ನು ನೀಡುತ್ತಿರುವುದರ ಅರ್ಥವೇನೆಂದು ಎಲ್ಲರಿಗೂ ತಿಳಿಯುತ್ತದೆ. ಎಲ್ಲ ಪಕ್ಷದ ಶಾಸಕರೂ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳುತ್ತಾರೆ. ಹಿಂದಿನ ಸರ್ಕಾರದಲ್ಲಿ ಹಗರಣ ಇದ್ದಿದ್ದರೆ, ಹಗರಣವನ್ನು ಏಕೆ ಬೆಳಕಿಗೆ ಬರಲಿಲ್ಲ ಎಂದರು.
ಬಿಲ್ಲು ಅನುಮೋದನೆಯಲ್ಲಿ ಪಾರದರ್ಶಕತೆ ಹಾಗೂ ಜೇಷ್ಠತೆ ಪಾಲಿಸಲಾಗುತ್ತಿದೆ :
ಹಲವರು ಗುತ್ತಿಗೆದಾರರ ಸಂಘಗಳಿವೆ. ಶೇ 5ಕ್ಕಿಂತ ಹೆಚ್ಚಿನ ಗುತ್ತಿಗೆಯನ್ನು ಕೊಡಬಾರದು ಎಂದು ಕಠಿಣವಾಗಿ ಅದನ್ನು ಪಾಲನೆ ಮಾಡುತ್ತಿದ್ದೇವೆ. ಸಣ್ಣ ಗುತ್ತಿಗೆದಾರರ ಬಿಲ್ಲುಗಳನ್ನು ಅನುಮೋದಿಸಲಾಗುತ್ತಿದೆ. ಪಾರದರ್ಶಕತೆ ಹಾಗೂ ಜೇಷ್ಠತೆಯನ್ನು ತರಲಾಗಿದೆ. ಸಣ್ಣ ಪ್ಯಾಕೇಜುಗಳನ್ನು ಮಾಡಬೇಕೆಂಬ ಅವರ ಬೇಡಿಕೆಯನ್ನು ಒಪ್ಪಿ ಆದೇಶ ಮಾಡಿದ್ದೇವೆ. ಎಲ್ಲಾ ಆದೇಶಗಳನ್ನು ಮಾಡಿಯೂ ಇವರು ಆರೋಪ ಮಾಡುತ್ತಾರೆ ಎಂದರೆ ಅರ್ಥವೇನು? ಯಾರಾದರೂ ಒಬ್ಬ ಅಧಿಕಾರಿ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ಹೇಳಲಿ. ಅವರ ಹೆಸರನ್ನು ತಿಳಿಸಲಿ. ಇಷ್ಟು ದಿನ ಅವರು ಯಾರ ಹೆಸರನ್ನೂ ಹೇಳಿಲ್ಲ. ನಿನ್ನೆ ಹೆಸರು ಹೇಳಿದ್ದಾರೆ. ಸಚಿವ ಮುನಿರತ್ನ ಅವರು ಮಾನನಷ್ಟ ಮೊಕದ್ದಮೆಯನ್ನು ಹಾಕುವುದಾಗಿ ತಿಳಿಸಿದ್ದಾರೆ. ಅವರು ಬೇಡವೆಂದರೂ ಅವರು ಮೊಕದ್ದಮೆ ಹಾಕುವುದಾಗಿ ತಿಳಿಸಿದ್ದಾರೆ. ಹೀಗಾಗಿ ಕ್ರಮ ಜರುಗಿಸಲಾಗುವುದು ಎಂದರು.
ಸಾಕ್ಷ್ಯಾಧಾರಗಳಿದ್ದರೆ ಕೊಡಿ :
ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಯಾವ ಪ್ರಕರಣವನ್ನು ತನಿಖೆಗೆ ಕೊಡಬೇಕು? ಕಾಂಗ್ರೆಸ್ ಇದ್ದಾಗ, ಎಲ್ಲಾ ಪ್ರಕರಣವನ್ನು ತನಿಖೆ ಮಾಡಿಸುತ್ತಿದ್ದರೆ? ಅವರೇನು ಸತ್ಯಹರಿಶ್ಚಂದ್ರರೇ? ರಾಜಕೀಯವಾಗಿ ಮಾಡುತ್ತಿರುವ ಪ್ರಯತ್ನ ಇದು. ಆಧಾರರಹಿತವಾಗಿ ಗುತ್ತಿಗೆದಾರರು, ರಾಜಕಾರಣಿಯಂತೆ ಕೆಲಸ ಮಾಡುತ್ತಿದ್ದಾರೆ. ಕೆಂಪಣ್ಣ ನನ್ನನ್ನು ಭೇಟಿಯಾದಾಗಲೂ ಅದನ್ನೇ ಹೇಳಿದ್ದೆ, ಸಾಕ್ಷ್ಯಾಧಾರಗಳಿದ್ದರೆ ಕೊಡಿ ಎಂದು ಕೇಳಿದ್ದೆವು. ಅವರ ಬೇಡಿಕೆಗಳನ್ನು ಈಡೇರಿಸಲಾಗಿದೆ. ಪ್ಯಾಕೇಜ್ ದೊಡ್ಡದಿದೆ ಎಂದಾಗ ತಾಲ್ಲೂಕು ಮಟ್ಟದಲ್ಲಿ 1 ಕೋಟಿಗಿಂತ ಹೆಚ್ಚಿನ ಟೆಂಡರ್ ಆಗಬಾರದೆಂದು ಆದೇಶಿಸಿದೆ. ಅಂದಾಜುಪಟ್ಟಿಯಲ್ಲಿ ಹೆಚ್ಚಿಗೆಯಾಗುತ್ತದೆ. ಅದನ್ನು ಪರಿಶೀಲಿಸಲು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಅಂದಾಜುಪಟ್ಟಿಯ ಮುನ್ನವೇ ಸಂಪೂರ್ಣವಾಗಿ ತನಿಖೆಯಾಗುತ್ತದೆ. ಟೆಂಡರ್ ನಿಯಮಗಳನ್ನೂ ಸಹ ಪರಿಶೀಲಿಸುತ್ತಾರೆ. ಪಾರದರ್ಶಕವಾಗಿ ಕೆಲಸ ಮಾಡಲಾಗುತ್ತಿದೆ. ಗುತ್ತಿಗೆದಾರರು ಇದರ ಲಾಭ ಪಡೆಯಬೇಕು ಎಂದರು.
ಪ್ರಾಥಮಿಕ ಶಿಕ್ಷಣ ಸಚಿವರು ಮದರಸಾಗಳನ್ನು ಪುನಶ್ಚೇತನಗೊಳಿಸಲು ಸಮಿತಿ ರಚಿಸುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮದರಸಾಗಳ ಸುಧಾರಣೆಗೆ ಅಲ್ಲಿಂದಲೇ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸಚಿವರು ಸಭೆಯನ್ನು ಕರೆದಿದ್ದರು ಎಂದು ಮುಖ್ಯಮಂತ್ರಿಗಳು ತಿಳಿಸಿದರು.