ಬಾಬಾ ಬುಡನ್ ಗಿರಿ ಸೌಹಾರ್ದ ಪರಂಪರೆಯ ರಕ್ಷಣೆಗಾಗಿ ನಾಗರಿಕ ಸಮಾಜ ಒಂದಾಗಿ ಹೋರಾಟ ರೂಪಿಸಲಿ: ಪಾಪ್ಯುಲರ್ ಫ್ರಂಟ್

Prasthutha|

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯು ಬೆಂಗಳೂರಿನಲ್ಲಿ ನಡೆಯಿತು.

- Advertisement -

ಬಾಬಾ ಬುಡನ್ ಗಿರಿ ಸೌಹಾರ್ದ ಪರಂಪರೆಯ ರಕ್ಷಣೆಗಾಗಿ ನಾಗರಿಕ ಸಮಾಜ ಒಂದಾಗಿ ಹೋರಾಟ ರೂಪಿಸಬೇಕು ಸೇರಿದಂತೆ ಮಹತ್ವದ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.

ಭಾವೈಕ್ಯತೆಯ ಪ್ರತೀಕವಾದ ಬಾಬಾಬುಡನ್ ಗಿರಿ ದರ್ಗಾ ಪರಿಸರವನ್ನು ಕೋಮುವಾದೀಕರಣಗೊಳಿಸಲು ಬಿಜೆಪಿ-ಸಂಘಪರಿವಾರದ ಶಕ್ತಿಗಳು ನಿರಂತರವಾಗಿ ಪ್ರಯತ್ನಿಸುತ್ತಾ ಬಂದಿವೆ. ಬಿಜೆಪಿ ಶಾಸಕರು, ಸಚಿವರು, ನಾಯಕರು ಪ್ರಚೋದನಕಾರಿ ಹೇಳಿಕೆಗಳ ಮೂಲಕ ಮತ್ತು ಸಂಘಪರಿವಾರದ ಸಂಘಟನೆಗಳು ದತ್ತ ಮಾಲಾ, ದತ್ತ ಜಯಂತಿ ಹೆಸರಿನಲ್ಲಿ ಅಶಾಂತಿ ಹರಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಕಳೆದ ವರ್ಷಗಳಲ್ಲಿ ಅಲ್ಲಿನ ಗೋರಿಗಳಿಗೆ ಹಾನಿ ಉಂಟು ಮಾಡಿದ ಪ್ರಸಂಗವೂ ನಡೆದಿತ್ತು. ಇದೀಗ ರಾಜ್ಯದ ಬಿಜೆಪಿ ಸರಕಾರವು ಶಾಖಾದ್ರಿಯ ಆಡಳಿತಾತ್ಮಕ ಮತ್ತು ಧಾರ್ಮಿಕ ಹಕ್ಕುಗಳನ್ನು ಕಸಿದುಕೊಂಡು ಅರ್ಚಕರನ್ನು ನೇಮಿಸುವ ಕಾನೂನುಬಾಹಿರವಾದ ನಿರ್ಧಾರವನ್ನು ಕೈಗೊಂಡಿದೆ ಮತ್ತು ವ್ಯವಸ್ಥಾಪನಾ ಸಮಿತಿಯ ಮೂಲಕ ಇಲ್ಲದ ಆಚರಣೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ಬಾಬಾ ಬುಡನ್ ಗಿರಿ ದರ್ಗಾದ ಮೂಲ ಸ್ವರೂಪಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನವಾಗಿದೆ. ಕಾನೂನುಬಾಹಿರ ಕ್ರಮಗಳ ಮೂಲಕ ಬಾಬಾ ಬುಡನ್ ಗಿರಿಯನ್ನು ತನ್ನ ಸುಪರ್ದಿಗೆ ಪಡೆಯಲು ಬಿಜೆಪಿ-ಸಂಘಪರಿವಾರವು ಪಿತೂರಿ ನಡೆಸುತ್ತಿದ್ದು, ಕರ್ನಾಟಕದ ಸೌಹಾರ್ದ ಪರಂಪರೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ರಕ್ಷಣೆಗಾಗಿ ಎಲ್ಲಾ ಜಾತ್ಯತೀತ ಪಕ್ಷಗಳು, ಸೌಹಾರ್ದ ಪ್ರೇಮಿಗಳು ಒಂದಾಗಿ ಹೋರಾಟ ನಡೆಸಬೇಕು. ಈ ಮೂಲಕ ಕರ್ನಾಟಕದ ಸಾಮರಸ್ಯ ಕೆಡಿಸುವ ಸಂಘಪರಿವಾರದ ಪ್ರಯತ್ನಗಳನ್ನು ವಿಫಲಗೊಳಿಸಬೇಕೆಂದು ಪಾಪ್ಯುಲರ್ ಫ್ರಂಟ್ ಎಸ್.ಇ.ಸಿ. ನಾಗರಿಕ ಸಮಾಜಕ್ಕೆ ಕರೆ ನೀಡಿದೆ.

- Advertisement -

ಮೆರವಣಿಗೆಯ ಹೆಸರಿನಲ್ಲಿ ಶಾಂತಿ ಕದಡುವ ಕೃತ್ಯಗಳಿಗೆ ಕಡಿವಾಣ ಹಾಕಿ

ಹಿಂದೂ ಸಮುದಾಯದ ಧಾರ್ಮಿಕ ಹಬ್ಬವಾದ ಗಣೇಶೋತ್ಸವ ಆಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಗಣೇಶೋತ್ಸವ ಆಚರಣೆಯ ಅಂಗವಾಗಿ ಮೆರವಣಿಗೆ, ಡಿ.ಜೆ ಸಂಗೀತ ಮೊದಲಾದ ಕಾರ್ಯಕ್ರಮಗಳು ನಡೆಯುತ್ತವೆ. ಇತ್ತೀಚಿನ ವರ್ಷಗಳಲ್ಲಿ ಸಂಘಪರಿವಾರದ ಸಂಘಟನೆಗಳು ಗಣೇಶೋತ್ಸವ ಆಚರಣೆಯ ಮೆರವಣಿಗೆಯನ್ನು ಮುಸ್ಲಿಮ್ ಬಾಹುಳ್ಯ ಪ್ರದೇಶಗಳಲ್ಲಿ ಅನಗತ್ಯವಾಗಿ ಸಾಗಿಸಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿವೆ. ಈ ಮೂಲಕ ದೊಡ್ಡ ಮಟ್ಟದಲ್ಲಿ ಗಲಭೆ ಸೃಷ್ಟಿಸಿ ಮುಸ್ಲಿಮರ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿ ಸಮಾಜದಲ್ಲಿ ಅಶಾಂತಿ ಹರಡುವ ಕೃತ್ಯಗಳೂ ನಡೆದಿರುವುದಕ್ಕೆ ಬಹಳಷ್ಟು ಉದಾಹರಣೆಗಳಿವೆ. ಕಳೆದ ರಾಮ ನವಮಿಯ ಮೇಲೆ ಸಂಘಪರಿವಾರದ ಶಕ್ತಿಗಳು ಮುಸ್ಲಿಮರ ಮನೆ, ಮಸ್ಜಿದ್ ಗಳಿಗೆ ಕಲ್ಲು ತೂರಾಟ ನಡೆಸಿದ್ದರು ಮತ್ತು ತಲವಾರು ಝಳಪಿಸಿ ಭೀತಿಯ ವಾತಾವರಣ ಸೃಷ್ಟಿಸಿದ್ದರು. ಸಾಮಾಜಿಕ ಶಾಂತಿಗೆ ಮಾರಕವಾದ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಬೇಕು ಮತ್ತು ದುಷ್ಕೃತ್ಯ ನಡೆಸುವವರ ವಿರುದ್ಧನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಎಸ್.ಇ.ಸಿ. ಆಗ್ರಹಿಸಿದೆ.

ಸಾವರ್ಕರ್ ಹೆಸರಿನಲ್ಲಿ ಸಾಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನ ತಡೆಯಬೇಕು

ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ ಸಾವರ್ಕರ್ ಭಾವಚಿತ್ರವನ್ನು ವೈಭವೀಕರಿಸುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ತನ್ನ ಕೋಮು ಧ್ರುವೀಕರಣದ ಭಾಗವಾಗಿ ಸಾವರ್ಕರ್ ಚಿತ್ರವನ್ನು ಅಳವಡಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಹರಡಲು ಪ್ರಯತ್ನಿಸುತ್ತಿದೆ. ಈಗಾಗಲೇ ಸಾವರ್ಕರ್ ಚಿತ್ರ ಅಳವಡಿಸಿದ ಕಾರಣ ರಾಜ್ಯ ವಿವಿಧ ಕಡೆಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಯಾಗಿತ್ತು. ನಂತರ ಪೊಲೀಸರೇ ಅದನ್ನು ತೆರವುಗೊಳಿಸುವ ಕಾರ್ಯ ನಡೆಸಿದ್ದರು. ಆದರೆ ಅಭಿವೃದ್ಧಿಯ ಯಾವುದೇ ವಿಚಾರಗಳನ್ನು ಜನರ ಮುಂದಿಡಲು ವಿಫಲವಾಗಿರುವ ಬಿಜೆಪಿ ತನ್ನ ರಾಜಕೀಯ ಲಾಭದ ದುರುದ್ದೇಶದಿಂದ ಇಂತಹ ಭಾವನಾತ್ಮಕ ವಿಚಾರಗಳನ್ನು ಮತ್ತಷ್ಟು ಜೀವಂತವಾಗಿಡಲು ಪ್ರಯತ್ನಿಸುತ್ತಿದೆ. ಸಮಾಜದ ಸ್ವಾಸ್ಥ್ಯ ಡಿಸುವ ಇಂತಹ ದುಷ್ಟ ಪ್ರಯತ್ನಗಳನ್ನು ತಡೆಯಲು ಪೊಲೀಸ್ ಇಲಾಖೆ ಮತ್ತು ಆಯಾ ಜಿಲ್ಲಾಡಳಿತಗಳು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಎಸ್.ಇ.ಸಿ ಒತ್ತಾಯಿಸಿದೆ.

ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಲಿ

ರಾಜ್ಯದಲ್ಲಿ ಇತ್ತೀಚಿಗೆ ಸುರಿದ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ, ಜೀವ ನಾಶ ಸಂಭವಿಸಿದೆ. ಮಾತ್ರವಲ್ಲ, ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ಹಲವೆಡೆ ಭೂಕುಸಿತವೂ ಕಂಡು ಬಂದಿದೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳ ನೆರವಿಗೆ ಧಾವಿಸಬೇಕಾಗಿರುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರವಾಹದ ವರದಿಗಳು ನಿರಂತರವಾಗಿವೆ. ಆದರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸರಕಾರವು ಎಡವುತ್ತಾ ಬಂದಿದೆ. ಅದೇ ರೀತಿ ಒಕ್ಕೂಟ ಸರಕಾರದಿಂದಲೂ ಪರಿಹಾರದ ಪಾಲನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಮುಖ್ಯವಾಗಿ ಮಳೆಗಾಲದ ಸಂದರ್ಭಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿರುವುದು ಅದರ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ರಾಜ್ಯ ಸರಕಾರವು ಭಾವನಾತ್ಮಕ ವಿಷಯಗಳನ್ನು ಕೆದಕುತ್ತಾ ಜನರಲ್ಲಿ ಪರಸ್ಪರ ಅಪನಂಬಿಕೆ ಸೃಷ್ಟಿಸುವ ಬದಲು, ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಸಂತ್ರಸ್ತ ಕುಟುಂಬಗಳಿಗೆ ಸಕಾಲಿಕವಾಗಿ ಮತ್ತು ರಾಜಕೀಯರಹಿತವಾಗಿ ಸೂಕ್ತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಎಸ್.ಇ.ಸಿ ಒತ್ತಾಯಿಸಿದೆ ಎಂದು ಪ್ರಕಟಣೆ ತಿಳಿಸಿದೆ.



Join Whatsapp