ಏಷ್ಯಾ ಕಪ್ ಟೂರ್ನಿಯಿಂದ ದ್ರಾವಿಡ್ ಹೊರಕ್ಕೆ: ವಿವಿಎಸ್ ಲಕ್ಷ್ಮಣ್ ಗೆ ಅವಕಾಶ

Prasthutha|

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕೋವಿಡ್–19 ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 27ರಿಂದ ಆರಂಭವಾಗಲಿರುವ ಏಷ್ಯಾ ಕಪ್‌ ಟೂರ್ನಿಯಿಂದ ದ್ರಾವಿಡ್‌ ಹೊರಗುಳಿಯಲಿದ್ದಾರೆ. ರಾಹುಲ್‌ ದ್ರಾವಿಡ್‌ ಅವರ ಸ್ಥಾನಕ್ಕೆ ನಿರೀಕ್ಷೆಯಂತೆಯೇ ವಿವಿಎಸ್‌ ಲಕ್ಷ್ಮಣ್‌ ಅವರನ್ನು ಟೀಮ್‌ ಇಂಡಿಯಾದ ತಾತ್ಕಾಲಿಕ ಕೋಚ್‌ ಆಗಿ ನೇಮಿಸಲಾಗಿದೆ. ಈ ಕುರಿತು ಬಿಸಿಸಿಐ, ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ನೀಡಿದೆ.

- Advertisement -

ಆಗಸ್ಟ್‌ 28ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಮೊದಲ ಪಂದ್ಯವನ್ನಾಡಲಿದೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾದ ಸದಸ್ಯರು ಮಂಗಳವಾರ ರಾತ್ರಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ತಂಡದ ಜೊತೆ ಕೋಚ್‌ ದ್ರಾವಿಡ್‌ ತೆರಳಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಜಿಂಬಾಬ್ವೆ ವಿರುದ್ಧ ಸೋಮವಾರ ಕೊನೆಗೊಂಡ ಏಕದಿನ ಕ್ರಿಕೆಟ್ ಸರಣಿಯಲ್ಲೂ ವಿವಿಎಸ್‌ ಲಕ್ಷ್ಮಣ್‌ ಮುಖ್ಯ ಕೋಚ್‌ ಪಾತ್ರ ನಿಭಾಯಿಸಿದ್ದರು. ಸರಣಿಯನ್ನು 3-0 ಅಂತರದಲ್ಲಿ ಭಾರತ, ಕ್ಲೀನ್‌ ಸ್ವೀಪ್‌ ಸಾಧನೆಮಾಡಿತ್ತು. ಈ ಸರಣಿಯಿಂದ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪಾರಸ್‌ ಮಾಂಬ್ರೆ ಹಾಗೂ ಇತರ ಕೋಚಿಂಗ್ ಸಿಬ್ಬಂದಿಗೆ ವಿಶ್ರಾಂತಿ ನೀಡಲಾಗಿತ್ತು.

- Advertisement -

ಇದಕ್ಕೂ ಮೊದಲು ಕಳೆದ ಜೂನ್​- ಜುಲೈ ತಿಂಗಳಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಐರ್ಲೆಂಡ್‌ ಪ್ರವಾಸ ಕೈಗೊಂಡಿದ್ದ ಟೀಮ್‌ ಇಂಡಿಯಾಗೆ ವಿ.ವಿ.ಎಸ್ ಲಕ್ಷ್ಮಣ್‌, ಕೋಚ್​ ಆಗಿ ಸೇವೆ ಸಲ್ಲಿಸಿದ್ದಾರೆ. ಇದೇ ವೇಳೆ ದ್ರಾವಿಡ್‌ ನೇತೃತ್ವದಲ್ಲಿ ಪ್ರಮುಖರಿದ್ದ ತಂಡ ಇಂಗ್ಲೆಂಡ್​ ಪ್ರವಾಸದಲ್ಲಿತ್ತು.

Join Whatsapp