ರಾಂಚಿ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ನಿಕಟವರ್ತಿಯ ಮನೆಯ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ದಾಳಿ ನಡೆಸಿದ ವೇಳೆ ಎರಡು ಎಕೆ-47 ರೈಫಲ್ಸ್ ಮತ್ತು 60 ಕಾಟ್ರಿಡ್ಜ್ ಗಳು ಪತ್ತೆಯಾಗಿರುವುದಾಗಿ ಬುಧವಾರ ವರದಿಯಾಗಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದ ಸಂಬಂಧ ಪ್ರಸ್ತುತ ನಡೆಯುತ್ತಿರುವ ತನಿಖೆ ಸಂಬಂಧ ಜಾರ್ಖಂಡ್ ನ ಅನೇಕ ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ. ಜಾರ್ಖಂಡ್ ಸಿಎಂ ನಿಕಟವರ್ತಿ ಪ್ರೇಮ್ ಪ್ರಕಾಶ್ ಎಂಬುವರಿಗೆ ಸೇರಿದ ಮನೆಯ ಮೇಲೆ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದಾಗ, ಬೀರುವಿನಲ್ಲಿ ಎಕೆ-47 ರೈಫಲ್ಸ್ ಪತ್ತೆಯಾಗಿವೆ.
ಈ ಅಕ್ರಮ ರೈಫಲ್ ಗಳನ್ನು ವಶಪಡಿಸಿಕೊಳ್ಳುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರೇಮ್ ಪ್ರಕಾಶ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.