ಪುಣೆ: ಗಂಡು ಮಗುವನ್ನು ಹೊಂದಲು ಮೂಢನಂಬಿಕೆಗೆ ಬಲಿಯಾಗಿ ಮಹಿಳೆಯೊಬ್ಬಳನ್ನು ಆಕೆಯ ಪತಿ ಮತ್ತು ಅತ್ತೆ-ಮಾವಂದಿರು ಜನರ ಮುಂದೆ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಬಲವಂತಪಡಿಸಿದ ಆಘಾತಕಾರಿ ಘಟನೆ ಪುಣೆಯಲ್ಲಿ ವರದಿಯಾಗಿದೆ.
ಮಹಿಳೆ ನೀಡಿದ ದೂರಿನ ಮೇರೆಗೆ ಪುಣೆ ಭಾರತಿ ವಿದ್ಯಾಪೀಠ ಪೊಲೀಸರು ಭಾನುವಾರ ಪತಿ, ಅತ್ತೆ-ಮಾವ ಮತ್ತು ಮಾಂತ್ರಿಕ ಸೇರಿದಂತೆ ನಾಲ್ವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ತನ್ನ ಅತ್ತೆ-ಮಾವಂದಿರು 2013 ರಿಂದಲೇ ವರದಕ್ಷಿಣೆಗಾಗಿ ಮತ್ತು ಗಂಡು ಮಗುವಿಗೆ ಜನ್ಮ ನೀಡದಿದ್ದಕ್ಕಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಆದರೆ ಇತ್ತೀಚೆಗೆ ಸಾರ್ವಜನಿಕವಾಗಿ ಬೆತ್ತಲೆಯಾಗಿ ಸ್ನಾನ ಮಾಡಿದರೆ ಗಂಡು ಮಗು ಜನಿಸುವುದಾಗಿ ಮಾಂತ್ರಿಕನೊಬ್ಬ ತಿಳಿಸಿದ್ದರಿಂದ ತನ್ನ ಪತಿ, ಅತ್ತೆ ಮಾವ ಸಾರ್ವಜನಿಕವಾಗಿ ಬಯಲಿನಲ್ಲಿ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ಐಪಿಸಿಯ ಸೆಕ್ಷನ್ 498 ಎ, 323, 420 ಮತ್ತು 504 406 ರ ಅಡಿಯಲ್ಲಿ ಮಹಾರಾಷ್ಟ್ರ ಮಾನವ ಬಲಿ ತಡೆಗಟ್ಟುವಿಕೆ ಮತ್ತು ನಿರ್ಮೂಲನೆ ಮತ್ತು ಇತರ ಅಮಾನವೀಯ, ದುಷ್ಟ ಮತ್ತು ಅಘೋರಿ ಅಭ್ಯಾಸಗಳು, 2013 ರ ಸೆಕ್ಷನ್ 3 ರ ಅಡಿಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.